ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಥಮ ವೈದ್ಯಕೀಯ ಸ್ನಾತಕೋತ್ತರ ಪದವಿ ತರಗತಿ ಉದ್ಘಾಟನೆ

ಕೊಣಾಜೆ: ಸ್ನಾತಕೋತ್ತರ ವಿದ್ಯಾರ್ಥಿಗಳು ಆಸ್ಪತ್ರೆಗಳ ಬೆನ್ನೆಲುಬು ಇದ್ದಂತೆ, ಯುದ್ಧದಲ್ಲಿ ಚಕ್ರವರ್ತಿಯ ಸ್ಥಾನದಂತೆ ಕೆಲಸ ಮಾಡಬೇಕಾದ ಅವರ ಹಿಂದೆ ಹಿರಿಯ, ಕಿರಿಯ ವೈದ್ಯ ಸಮೂಹವಿರುತ್ತದೆ. ರೋಗಿಗಳಲ್ಲಿರುವ ಸೋಂಕನ್ನು ಪತ್ತೆಹಚ್ಚುವ ಕುಶಲತೆಯನ್ನು ಬೆಳೆಸುವ ಜೊತೆಗೆ ಅವರ ಜೊತೆಗೆ ಹಾಗೂ ರೋಗಿಯ ಸಂಬಂಧಿಕರ ಜೊತೆಗೆ ಬಾಂಧವ್ಯ, ಸಹಾನುಭೂತಿ, ಸಂವಹನ, ಸಂಭಾಷಣೆ ಕೌಶಲ್ಯವನ್ನು ಬೆಳೆಸುವುದರಿಂದ ಬಹಳಷ್ಟು ಉಪಯೋಗವಿದೆ ಎಂದು ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕುಲಪತಿ ಡಾ. ಎಂ. ಕೆ. ರಮೇಶ್ ಹೇಳಿದರು.
ಅವರು ಶುಕ್ರವಾರ ನಾಟೆಕಲ್ ಕಣಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಥಮ ವೈದ್ಯಕೀಯ ಸ್ನಾತಕೋತ್ತರ ಪದವಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಎಂಬಿಬಿಎಸ್ ಪದವಿಯ ಅವಧಿ ಕಡಿತ ಹಾಗೂ ಸ್ನಾತಕೋತ್ತರ ವಿಭಾಗವನ್ನು ಎಂಬಿಬಿಎಸ್ ಜೊತೆಗೆ ವಿಲೀನಗೊಳಿಸುವ ಪ್ರಸ್ತಾಪನೆಗಳಿದ್ದು, ಈ ಕುರಿತು ಸಂಬಂಧಪಟ್ಟ ಇಲಾಖೆಗಳು ಹಾಗೂ ತಜ್ಞರ ಜೊತೆಗೆ ಚರ್ಚಿಸುವ ವೇದಿಕೆಯನ್ನು ಮುಂದಿನ ದಿನಗಳಲ್ಲಿ ನಡೆಸುವ ಚಿಂತನೆಯನ್ನು ನಡೆಸಲಿದೆ ಎಂದು ಹೇಳಿದರು.
ವೈದ್ಯ ತರಬೇತಿ ಅವಧಿಯಲ್ಲಿ ಗ್ರಾಮೀಣ ಭಾಗಗಳಲ್ಲಿ ಕಡ್ಡಾಯ ಸೇವೆ ನಡೆಸುವಂತೆ ಕೇಂದ್ರ ಸರಕಾರ ಕರಾರು ಪತ್ರದಲ್ಲಿ ಉಲ್ಲೇಖ ಮಾಡಿದ್ದು, ಅದನ್ನು ನ್ಯಾಯಾಲಯದಲ್ಲಿ ಇದೊಂದು ಬೇರೆ ಕ್ಷೇತ್ರಗಳಲ್ಲಿರದ ಗುಲಾಮಗಿರಿ ಎಂದು ಪ್ರಶ್ನಿಸಿದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿತ್ತು. ಆದರೂ ಗ್ರಾಮೀಣ ಭಾಗಗಳಲ್ಲಿ ವೈದ್ಯರ ಕೊರತೆ ಇರುವುದನ್ನು ಮುಂದಿಟ್ಟು ಸರಕಾರ ಸ್ವ ಇಚ್ಛೆಯಿಂದ ಹೋಗಲು ಇಚ್ಛಿಸುವವರು ಸೇವೆ ನೀಡುವಂತೆ ಸೂಚಿಸಿತ್ತು. ಅದರ ಆಧಾರದಡಿ ರಾಜೀವ್ ಗಾಂಧಿ ವಿ.ವಿ ದೇಶದ ಉತ್ತರ ಭಾಗಗಳಲ್ಲಿ ವೈದ್ಯರ ಕೊರತೆ ಇರುವುದರಿಂದ ಕರ್ನಾಟಕ ಸೇರಿದಂತೆ ದಕ್ಷಿಣ ಭಾಗದ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಆ ಭಾಗದ ಸಂಸ್ಕೃತಿಯನ್ನು ಅರಿಯುವುದರ ಜೊತೆಗೆ ಸೇವೆಯನ್ನು ನೀಡಲು ಕಳುಹಿಸಲು ಮಾರ್ಗಸೂಚಿಯನ್ನು ನೀಡಿದೆ ಎಂದರು.
ಕಣ್ಣೂರು ಹಾಗೂ ಕಲ್ಲಿಕೋಟೆ ವಿವಿಯ ವಿಶ್ರಾಂತ ಕುಲಪತಿ, ಕಣಚೂರು ಸಮೂಹ ಸಂಸ್ಥೆ ಸಲಹಾ ಸಮಿತಿ ಮುಖ್ಯಸ್ಥ ಡಾ. ಅಬ್ದುಲ್ ರಹಿಮಾನ್ ಮಾತನಾಡಿ, ವೈದ್ಯಕೀಯ ಸ್ನಾತಕೋತ್ತರ ವಿಭಾಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ಕಾಯ್ದುಕೊಳ್ಳಲು ಸಂಶೋಧನೆ ಸಹಕಾರಿ. ಈ ನಿಟ್ಟಿನಲ್ಲಿ ಸಂಸ್ಥೆ ಸಂಶೋಧನೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ಕಣಚೂರು ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆಂಡ್ ರಿಸರ್ಚ್ ಸೆಂಟರ್ ನ ಚೇರ್ ಮೆನ್ ಯು.ಕೆ. ಮೋನು, ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ
ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಕರ್ ಅಲಿ, ಕಣಚೂರು ನಿರ್ದೇಶಕ ಅಬ್ದುಲ್ ರಹಿಮಾನ್, ಝೌರಾ ಬಾನು, ಸಾಹಿದಾ ರಹಿಮಾನ್ , ವೈದ್ಯಕೀಯ ಅಧೀಕ್ಷಕ ಡಾ. ಹರೀಶ್ ಶೆಟ್ಟಿ , ಡಾ. ಕಿರಣ್ , ಮುಖ್ಯ ಆಡಳಿತಾಧಿಕಾರಿ ಡಾ. ರೋಹನ್ ಮೋನಿಸ್ ಉಪಸ್ಥಿತರಿದ್ದರು
ಕಣಚೂರು ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಡೀನ್ ಡಾ. ಎಚ್. ಎಸ್. ವಿರೂಪಾಕ್ಷ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಮೆಡಿಸಿನ್ ವಿಭಾಗ ಮುಖ್ಯಸ್ಥ ಡಾ. ಬಿ. ದೇವದಾಸ್ ರೈ ವಂದಿಸಿದರು.