ಮಾ.28ರಿಂದ ಎಸೆಸೆಲ್ಸಿ ಪರೀಕ್ಷೆ: ದ.ಕ. ಜಿಲ್ಲೆಯಲ್ಲಿ ಪರೀಕ್ಷೆ ಬರೆಯಲಿರುವ 29,712 ವಿದ್ಯಾರ್ಥಿಗಳು

ಸಾಂದರ್ಭಿಕ ಚಿತ್ರ
ಮಂಗಳೂರು, ಮಾ.26: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯು ಮಾ.28ರಿಂದ ಎಪ್ರಿಲ್ 11ರವರೆಗೆ ನಡೆಯಲಿದ್ದು, ದ.ಕ. ಜಿಲ್ಲೆಯಲ್ಲಿ ಒಟ್ಟು 99 ಪರೀಕ್ಷಾ ಕೇಂದ್ರಗಳಲ್ಲಿ 29,712 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಾಯಿಸಿಕೊಂಡಿದ್ದಾರೆ.
ಈ ಪರೀಕ್ಷಾ ಕೇಂದ್ರಗಳಿಗೆ 99 ಮುಖ್ಯ ಅಧೀಕ್ಷಕರು, 24 ಉಪ ಮುಖ್ಯ ಅಧೀಕ್ಷಕರು, 99 ಕಸ್ಟೋಡಿಯನ್, 99 ಸ್ಥಾನಿಕ ಜಾಗೃತ ದಳದ ಕಾರ್ಯಕ್ಕೆ ಅಧಿಕಾರಿ, 99 ಮಂದಿ ಮೊಬೈಲ್ ಫೋನ್ ಸ್ವಾಧೀನಾಧಿಕಾರಿಗಳು, 35 ಮಾರ್ಗಾಧಿಕಾರಿಗಳು, 1,588 ಮಂದಿ ಕೊಠಠಿ ಮೇಲ್ವಿಚಾರಕರನ್ನು ನೇಮಕ ಮಾಡಲಾಗಿದೆ ಎಂದು ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಸುಧಾಕರ್ ಕೆ. ತಿಳಿಸಿದ್ದಾರೆ.
ಬಂಟ್ವಾಳದಲ್ಲಿ 17 ಪರೀಕ್ಷಾ ಕೇಂದ್ರಗಳಿದ್ದು, 96 ಶಾಲೆಗಳ ವಿದ್ಯಾರ್ಥಿಗಳು 292 ಕೊಠಡಿಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ. ಬೆಳ್ತಂಗಡಿಯಲ್ಲಿ 14 ಕೇಂದ್ರಗಳ 205 ಕೊಠಡಿಗಳಲ್ಲಿ 72 ಶಾಲೆಗಳ ವಿದ್ಯಾರ್ಥಿಗಳು, ಮಂಗಳೂರು ಉತ್ತರದ 20 ಕೇಂದ್ರಗಳ 281 ಕೊಠಡಿಗಳಲ್ಲಿ 98 ಶಾಲೆಗಳ ವಿದ್ಯಾರ್ಥಿಗಳು, ಮಂಗಳೂರು ದಕ್ಷಿಣದಲ್ಲಿ 23 ಕೇಂದ್ರಗಳ 273 ಕೊಠಡಿಗಳಲ್ಲಿ 110 ಶಾಲಾ ವಿದ್ಯಾರ್ಥಿಗಳು, ಮೂಡುಬಿದಿರೆಯ 5 ಕೇಂದ್ರಗಳ 92 ಕೊಠಡಿಗಳಲ್ಲಿ 31 ಶಾಲೆಗಳ ವಿದ್ಯಾರ್ಥಿಗಳು, ಪುತ್ತೂರಿನ 14 ಕೇಂದ್ರಗಳಲ್ಲಿ 248 ಕೊಠಡಿಗಳಲ್ಲಿ 28 ಶಾಲೆಗಳ ವಿದ್ಯಾರ್ಥಿಗಳು, ಸುಳ್ಯದ 6 ಕೇಂದ್ರಗಳ 98 ಕೊಠಡಿಗಳಲ್ಲಿ 36 ಶಾಲೆಗಳ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 523 ಶಾಲೆಗಳ ವಿದ್ಯಾರ್ಥಿಗಳು ಈ ಬಾರಿ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಪರೀಕ್ಷಾ ಸಿದ್ಧತೆ ಕುರಿತಂತೆ ಈಗಾಗಲೇ ಪೂರ್ವಭಾವಿ ಸಭೆ ನಡೆಸಲಾಗಿದ್ದು, ಅಗತ್ಯ ಕ್ರಮಗಳ ಕುರಿತು ಚರ್ಚೆ ನಡೆದಿದೆ ಎಂದು ಡಿಡಿಪಿಐ ಸುಧಾಕರ್ ತಿಳಿಸಿದ್ದಾರೆ.