ವಿವಾದಾತ್ಮಕ ಮತಾಂತರ ತಡೆ ಮಸೂದೆ ಅಂಗೀಕಾರ ವಿಳಂಬ?

ಬೆಂಗಳೂರು: ವಿವಾದಾತ್ಮಕ ಮತಾಂತರ ನಿಷೇಧ ಮಸೂದೆ ಬಗ್ಗೆ ಆಡಳಿತಾರೂಢ ಬಿಜೆಪಿ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳದಿರುವ ಕಾರಣ ರಾಜ್ಯ ವಿಧಾನ ಪರಿಷತ್ತಿನಲ್ಲಿ ಮಸೂದೆಯ ಆಂಗೀಕಾರ ಇನ್ನಷ್ಟು ವಿಳಂಬಗೊಳ್ಳುವ ಸಾಧ್ಯತೆ ಇದೆ ಎಂದು deccanherald.com ವರದಿ ಮಾಡಿದೆ.
ಬಜೆಟ್ ಅಧಿವೇಶನ ಮುಂದಿನ ವಾರ ಮುಕ್ತಾಯವಾಗಲಿದ್ದು, ಈ ಅಧಿವೇಶನದಲ್ಲೂ ಮಸೂದೆ ಸದನದ ಒಪ್ಪಿಗೆ ಪಡೆಯುವುದು ಅನುಮಾನ. ಪಕ್ಷದ ನಿರ್ದೇಶನಕ್ಕಾಗಿ ಕಾಯಲಾಗುತ್ತಿದೆ ಎಂದು ಸದನದ ಬಿಜೆಪಿ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಆದರೆ ಮೇಲ್ಮನೆಯಲ್ಲಿ ಸ್ಪಷ್ಟ ಬಹುಮತ ಗಳಿಸಿಕೊಳ್ಳುವವರೆಗೂ ಬಿಜೆಪಿ ನಿಧಾನ ನೀತಿ ಅನುಸರಿಸಲಿದೆ ಎಂದು ಮೂಲಗಳು ಹೇಳಿವೆ ಎಂದು ವರದಿಯಾಗಿದೆ.
ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಮಸೂದೆಗೆ ಕಳೆದ ಡಿಸೆಂಬರ್ ನಲ್ಲಿ ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಕೆಳಮನೆಯಲ್ಲಿ ಅನುಮೋದನೆ ಸಿಕ್ಕಿತ್ತು. ಈ ಮಸೂದೆ ಕ್ರಿಶ್ಚಿಯನ್ನರನ್ನು ಗುರಿ ಮಾಡಿದೆ ಎಂಬ ವಿರೋಧದ ನಡುವೆಯೂ ಮಸೂದೆ ಆಂಗೀಕಾರವಾಗಿತ್ತು. ಬಳಿಕ ಇದನ್ನು ಮೇಲ್ಮನೆಯಲ್ಲಿ ಮಂಡಿಸಲಾಯಿತಾದರೂ ಅದನ್ನು ಅನುಮೋದನೆಗೆ ಕೈಗೆತ್ತಿಕೊಳ್ಳಲಿಲ್ಲ.
ಮೇಲ್ಮನೆ ಅಧಿವೇಶನ ಮಾರ್ಚ್ 30ರವರೆಗೆ ನಡೆಯಲಿದ್ದು, ಮಸೂದೆ ಮೇಲ್ಮನೆಯಲ್ಲಿ ಆಂಗೀಕಾರವಾಗುವ ನಿರೀಕ್ಷೆ ಸರ್ಕಾರಕ್ಕೆ ಇದೆ. ಆದಾಗ್ಯೂ ನಾವು ಪಕ್ಷದ ನಿರ್ದೇಶನಕ್ಕೆ ಕಾಯುತ್ತಿದ್ದೇವೆ ಎಂದು ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ಪ್ರಸಕ್ತ ಅಧಿವೇಶನದ ಅವಧಿಯಲ್ಲಿ ಮಸೂದೆ ಅಂಗೀಕಾರವಾಗುವ ಸಾಧ್ಯತೆ ಇಲ್ಲ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖತೆ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿದ್ದಾರೆ.
75 ಸದಸ್ಯಬಲದ ಮೇಲ್ಮನೆಯಲ್ಲಿ ಬಿಜೆಪಿ 37 ಸದಸ್ಯರನ್ನು ಹೊಂದಿದೆ. ಮಸೂದೆ ಆಂಗೀಕಾರಕ್ಕೆ ಪಕ್ಷೇತರ ಸದಸ್ಯ ಲಖನ್ ಜಾರಕಿಹೊಳಿಯವರ ಬೆಂಬಲ ಪಡೆಯಬೇಕಾದ ಅನಿವಾರ್ಯತೆ ಇದೆ.
ಮಸೂದೆಯನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರಿಂದ ಸ್ಪಷ್ಟನೆಗೆ ಕಾಯಲಾಗುತ್ತಿದೆ. ನಮಗೆ ಬಹುಮತಕ್ಕೆ ಒಂದು ಸ್ಥಾನದ ಕೊರತೆ ಇದೆ. ಆದರೆ ಇದು ಮಸೂದೆ ಅಂಗೀಕಾರಕ್ಕೆ ಅಡ್ಡಿಯಾಗದು. ಆದರೆ ಏಕೆ ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ ಎಂದು ಪಕ್ಷದ ಮುಖಂಡರೊಬ್ಬರು ಹೇಳಿದ್ದಾರೆ.
ಮಸೂದೆ ಅನ್ವಯ ಬಲವಂತದ ಮತಾಂತಕ್ಕೆ 25 ಸಾವಿರ ರೂಪಾಯಿ ದಂಡ ಮತ್ತು 3-5 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಅಂತೆಯೇ ಮಹಿಳೆ, ಅಪ್ರಾಪ್ತರು ಮತ್ತು ಎಸ್ಸಿ/ಎಸ್ಟಿಗಳ ಮತಾಂತರಕ್ಕೆ 3-10 ವರ್ಷ ಜೈಲು ಮತ್ತು 50 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಸಾಮೂಹಿಕ ಮತಾಂತರಕ್ಕೆ 3-10 ವರ್ಷ ಜೈಲು ಹಾಗೂ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.







