ರಾಜ್ಯದಲ್ಲಿ ಯುವಕರಿಗೆ ಕೇಸರಿ ಶಾಲು ಹಾಕಿ ಗಲಭೆ ಮಾಡಿಸುವುದನ್ನು ಬಿಟ್ಟು ಉದ್ಯೋಗ ಕೊಡಿ: ಪ್ರಿಯಾಂಕ್ ಖರ್ಗೆ
''ರಾಜ್ಯ ಬಿಜೆಪಿಯವರು ಯುಪಿ ಮಾಡಲು ಹೊರಟಿದ್ದಾರೆ''

ಬೆಂಗಳೂರು, ಮಾ. 26: ‘ರಾಜ್ಯದಲ್ಲಿನ ಯುವಕರಿಗೆ ಕೇಸರಿ ಶಾಲು ಹಾಕಿ ಗಲಭೆ ಮಾಡಿಸುವುದನ್ನು ಬಿಟ್ಟು ಅವರಿಗೆ ಉದ್ಯೋಗ ಕೊಡಬೇಕು. ಬಿಜೆಪಿ ಅವಧಿಯಲ್ಲಿ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿದ್ದು, ಏಳು ವರ್ಷಗಳಲ್ಲಿ ಅತ್ಯಂತ ಹೆಚ್ಚು ನಿರುದ್ಯೋಗ ಸೃಷ್ಟಿಯಾಗಿದೆ. ತರಬೇತಿ ಮತ್ತು ಉದ್ಯೋಗ ಇಲಾಖೆಯಲ್ಲಿ ಹೆಚ್ಚು ಹುದ್ದೆಗಳು ಖಾಲಿ ಇವೆ. 3,643 ಹುದ್ದೆಗಳು ಈ ಇಲಾಖೆಯಲ್ಲಿ ಖಾಲಿ ಉಳಿದಿದ್ದು, ಅವುಗಳನ್ನು ಭರ್ತಿ ಮಾಡಬೇಕು. ಉದ್ಯೋಗ ಕೊಡುವ ಇಲಾಖೆಯಲ್ಲೇ ಶೇ.50ಕ್ಕಿಂತ ಹೆಚ್ಚು ಹುದ್ದೆಗಳು ಖಾಲಿ ಇವೆ' ಎಂದು ಮಾಜಿ ಸಚಿವ ಹಾಗೂ ಚಿತ್ತಾಪುರ ಕ್ಷೇತ್ರದ ಹಾಲಿ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶನಿವಾರ ಇಲ್ಲಿನ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶಾಂತಿ, ಸಾಮರಸ್ಯಕ್ಕೆ ಹೆಸರಾಗಿರುವ ಕರ್ನಾಟಕವನ್ನು ಉತ್ತರ ಪ್ರದೇಶವನ್ನಾಗಿ ಬಿಜೆಪಿ ಹೊರಟಿದೆ. ಹೀಗಾಗಿಯೇ ಹಿಂದೂ-ಮುಸ್ಲಿಮ್ ಸಮುದಾಯದ ನಡುವೆ ದ್ವೇಷ ಹಬ್ಬಿಸುವ ಕೆಲಸವನ್ನು ಬಿಜೆಪಿ ಅತ್ಯಂತ ವ್ಯವಸ್ಥಿತವಾಗಿ ಮಾಡುತ್ತಿದೆ' ಎಂದು ಆರೋಪಿಸಿದ್ದಾರೆ.
‘ಉತ್ತರ ಪ್ರದೇಶದ ಕೆಲ ಬಿಜೆಪಿ ನಾಯಕರು ದ್ವೇಷ ಹರಡುವ ಕೆಲಸ ಮಾಡುತ್ತಿದ್ದಾರೆ. ಹಿಜಾಬ್, ಭಗವದ್ಗೀತೆ, ಮುಸ್ಲಿಮ್ ವ್ಯಾಪಾರಸ್ಥರಿಗೆ ನಿರ್ಬಂಧ ಸೇರಿದಂತೆ ಇನ್ನಿತರ ವಿಚಾರಗಳ ಹಿನ್ನೆಲೆಯಲ್ಲಿ 2 ವರ್ಷಗಳಿಂದ ರಾಜ್ಯಕ್ಕೆ ಬಂಡವಾಳ ಹರಿದು ಬರುತ್ತಿಲ್ಲ. ಜಾತಿ-ಧರ್ಮದ ರಾಜಕಾರಣ ನಡೆದಿದೆ' ಎಂದು ದೂರಿದರು.
‘ಉತ್ತರ ಪ್ರದೇಶದವರು ಕರ್ನಾಟಕದ ಮಾದರಿ ಬೇಕು ಎನ್ನುತ್ತಾರೆ. ಆದರೆ, ಇಲ್ಲಿನ ಬಿಜೆಪಿಯವರು ಯುಪಿ ಮಾಡಲು ಹೊರಟಿದ್ದಾರೆ. ಇದು ಸಾಮರಸ್ಯಕ್ಕೆ ಧಕ್ಕೆ ತರುವ ಕೆಲಸ. ರಾಜ್ಯದಲ್ಲಿ ಮುಸ್ಲಿಮ್ ವ್ಯಾಪಾರಿಗಳಿಗೆ ಕೆಲ ದೇವಸ್ಥಾನಗಳಲ್ಲಿ ನಿರ್ಬಂಧ ಸರಿಯಲ್ಲ. ಕೇಂದ್ರ ಸರಕಾರ ಇಸ್ಲಾಂ ರಾಷ್ಟ್ರಗಳ ಜತೆ ವ್ಯಾಪಾರ, ವ್ಯವಹಾರ ನಡೆಸುವುದಿಲ್ಲ ಎಂದು ಹೇಳಬೇಕು' ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದರು.
‘ಪೆಟ್ರೋಲ್-ಡೀಸೆಲ್ ಆಮದು ಮಾಡಿಕೊಳ್ಳುತ್ತಿರುವುದು ಮುಸ್ಲಿಂ ರಾಷ್ಟ್ರಗಳಿಂದಲ್ಲವೇ? ಹಸಿವಿಗೆ ಯಾವ ಜಾತಿ-ಧರ್ಮವಿದೆ. ಜಾತಿ ಮತ್ತು ಧರ್ಮ ರಾಜಕಾರಣ ಎಂದಿಗೂ ಸರಿಯಲ್ಲ. ನಮ್ಮ ದೇಶದಿಂದ ಮುಸ್ಲಿಂ ರಾಷ್ಟ್ರಗಳಿಗೆ ಕೆಲಸಕ್ಕೆ ತೆರಳಿದ್ದಾರೆ. ಅವರನ್ನೆಲ್ಲ ಏಕೆ ಅಲ್ಲಿಗೆ ಕಳುಹಿಸಬೇಕು. ಅವರನ್ನು ಹಿಂದಕ್ಕೆ ಕರೆಸಿಕೊಳ್ಳಲಿ' ಎಂದು ಪ್ರಿಯಾಂಕ್ ಖರ್ಗೆ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
ನಮ್ಮ ದೇಶಕ್ಕೆ ರೇಶ್ಮೆ ಪರಿಚಯಿಸಿದವರು ಯಾರು? ಮೈಸೂರು ಹುಲಿ ಎಂದು ಖ್ಯಾತಿ ಪಡೆದಿರುವ ಟಿಪ್ಪು ಸುಲ್ತಾನ್, ಅವರು ಮುಸ್ಲಿಮ್ ಅದನ್ನು ಸುಡಲು ಸಾಧ್ಯವೇ? ಲಾಲ್‍ಬಾಗ್ ಮಾಡಿದ್ದು ಹೈದರಾಲಿ ಸುಡಲು ಆಗುತ್ತಾ? ಕಾಫಿ ಬಂದಿದ್ದು ಬಾಬಾಬುಡಾನ್‍ರಿಂದ. ಅರೇಬಿಯಾದಿಂದ ಸ್ಮಗಲ್ ಮಾಡಿಕೊಂಡು ಬಂದಿದ್ದು ಕಾಫಿ. ಇದರಿಂದ ಎಷ್ಟೊ ಜನರಿಗೆ ಉದ್ಯೋಗ ಸಿಕ್ಕಿದೆ. ಆದರೆ, ಬಿಜೆಪಿಯವರು ಯುವಕರನ್ನು ಗೋರಕ್ಷಕರಾಗಿ ಮಾಡುತ್ತಿದ್ದಾರೆ. ಕೇಸರಿ ಶಾಲು ಹಾಕಿ ಗೋರಕ್ಷಣೆ ಮಾಡಿದರೆ ಉದ್ಯೋಗ ಸೃಷ್ಟಿಯೇ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.
ಕೃಷಿ ಉತ್ಪನ್ನಗಳು 5,585 ಮಿಲಿಯನ್ ಮೊತ್ತದಲ್ಲಿ ರಫ್ತು ಮಾಡಲಾಗುತ್ತಿದೆ. ಮುಸ್ಲಿಂ ರಾಷ್ಟ್ರಗಳಿಗೆ ರಪ್ತು ನಿಷೇಧಿಸಲಿ, ಆಮದು ನಿಷೇಧಿಸಲಿ, ಇದೆಲ್ಲ ಮಾಡಲಿಕ್ಕಾಗುತ್ತದೆಯೇ ಸರಕಾರಕ್ಕೆ? 1.12 ಕೋಟಿ ನಮ್ಮ ದೇಶದ ಜನರು ಇಸ್ಲಾಮಿಕ್ ದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. 7.5 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಇಸ್ಲಾಮಿಕ್ ದೇಶಗಳಲ್ಲಿ ಶಿಕ್ಷಣ ಕಲಿಯುತ್ತಿದ್ದಾರೆ ಎಂದು ವಿವರಣೆ ನೀಡಿದರು.
‘ಬಜೆಟ್‍ನಲ್ಲಿ ಯೋಜನೆಗಳ ಅನುಷ್ಠಾನ ಬಗ್ಗೆ ಸ್ಪಷ್ಟತೆ ಇಲ್ಲ. ಘೋಷಣೆಗಳು ಬಹಳ ಇವೆ. ಶಿಕ್ಷಣ, ಉದ್ಯೋಗ, ಸಬಲೀಕರಣಕ್ಕೆ ಯಾವುದೇ ನಿಲುವು ತೆಗೆದುಕೊಂಡಿಲ್ಲ. ಯೋಜನೆಗಳ ಜಾರಿಗೆ ಸರಿಯಾದ ನೀಲಿನಕ್ಷೆ ನೀಡಿಲ್ಲ. ಡಬಲ್ ಎಂಜಿನ್ ಸರಕಾರದಲ್ಲಿ ಜನರಿಗೆ ಡಬಲ್ ದೋಖಾ ಆಗುತ್ತಿದೆ. 2019-20ರಲ್ಲಿ 49 ಸಾವಿರ ಪುರುಷರು, 33 ಸಾವಿರ ಮಹಿಳೆಯರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ತಿಳಿಸಿದರು.







