2011ರ ಕೆಪಿಎಸ್ಸಿ ನೇಮಕಾತಿ ಪ್ರಕರಣ: ಎ.4ರವರೆಗೆ ಹೈಕೋರ್ಟ್‍ನಿಂದ ಮಧ್ಯಂತರ ತಡೆ ವಿಸ್ತರಣೆ

ಬೆಂಗಳೂರು, ಮಾ.26: 2011ನೆ ಸಾಲಿನ ಕೆಪಿಎಸ್ಸಿ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕಾತಿಯಲ್ಲಿ 362 ಅಭ್ಯರ್ಥಿಗಳ ಆಯ್ಕೆ ಸಿಂಧುಗೊಳಿಸುವುದಕ್ಕೆ ಸಂಬಂಧಿಸಿದ ಕರ್ನಾಟಕ ಸಿವಿಲ್ ಸೇವೆಗಳ ಕಾಯ್ದೆಗೆ ನೀಡಿದ್ದ ಮಧ್ಯಂತರ ತಡೆಯಾಜ್ಞೆಯನ್ನು ಹೈಕೋರ್ಟ್ ಎ.4ರವರೆಗೆ ವಿಸ್ತರಿಸಿದೆ.
ಸೋಮವಾರ(ಮಾ.28) ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯಲ್ಲಿ(ಕೆಎಟಿ) ವಿಚಾರಣೆ ಆರಂಭವಾಗಲಿದ್ದು, ಅಲ್ಲಿ ಮಧ್ಯಂತರ ಆದೇಶದ ಬಗ್ಗೆ ನಿರ್ಧಾರವಾಗುವವರೆಗೆ ಅಭ್ಯರ್ಥಿಗಳಿಗೆ ನೇಮಕಾತಿ ಪತ್ರ ವಿತರಿಸಬಾರದು, ಕಾಯ್ದೆ ಜಾರಿ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಸರಕಾರಕ್ಕೆ ನ್ಯಾಯಪೀಠ ಮೌಖಿಕ ಸೂಚನೆ ನೀಡಿದೆ.
ಮಧ್ಯಂತರ ಆದೇಶಕ್ಕೆ ನಿರಾಕರಿಸಿದ್ದ ಕೆಎಟಿ ಕ್ರಮ ಪ್ರಶ್ನಿಸಿ ಎ.ಟಿ.ಶ್ರೀನಿವಾಸ್ ಮತ್ತಿತರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ.ನರೇಂದರ್, ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ಕೆ. ನಾವದಗಿ, ಇದೇ ವಿಚಾರಕ್ಕೆ ಸಂಬಂಧಿಸಿದ ಅರ್ಜಿಗಳು ಕೆಎಟಿ ಮುಂದೆ ಇದ್ದು, ಸೋಮವಾರ ಅರ್ಜಿಗಳು ವಿಚಾರಣೆಗೆ ಬರಲಿವೆ ಎಂದರು.
ಹೀಗಾಗಿ, ಇಲ್ಲಿ ಮತ್ತದೇ ವಿಷಯ ಕುರಿತ ಅರ್ಜಿಗಳ ವಿಚಾರಣೆ ನಡೆಸುವುದು ಸೂಕ್ತವಲ್ಲ. ಇದರಿಂದ, ನ್ಯಾಯಾಲಯದ ಸಮಯ ವ್ಯರ್ಥವಾಗಲಿದೆ. ಅರ್ಜಿಗಳ ಸಂಬಂಧ ಮೊದಲು ಕೆಎಟಿ ತೀರ್ಮಾನ ಕೈಗೊಳ್ಳಲಿ. ಆನಂತರ ಹೈಕೋರ್ಟ್ ವಿಚಾರಣೆ ಕೈಗೆತ್ತಿಕೊಳ್ಳಬಹುದು ಎಂದರು.
ಎಲ್ಲರಿಗೂ ಅವಕಾಶ: ಆಯ್ಕೆಯಾಗಿರುವ ಅಭ್ಯರ್ಥಿಗಳ ಪರ ವಕೀಲರು, ಕೆಎಟಿಯಲ್ಲಿ ಸಲ್ಲಿಸಲಾಗಿರುವ ಅರ್ಜಿಯಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಿಲ್ಲ. ಹೀಗಾಗಿ, ನಮ್ಮ ಮಧ್ಯಂತರ ಅರ್ಜಿಯನ್ನೂ ಮಾನ್ಯ ಮಾಡಿ ನಮ್ಮನ್ನೂ ಪ್ರತಿವಾದಿಗಳನ್ನಾಗಿ ಪರಿಗಣಿಸಬೇಕೆಂದು ಕೋರಿದರು. ಆ ಮಧ್ಯಂತರ ಅರ್ಜಿಗಳನ್ನು ನ್ಯಾಯಪೀಠ ಪುರಸ್ಕರಿಸಿತು. ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ವಾದಿಗಳು-ಪ್ರತಿವಾದಿಗಳ ವಾದವನ್ನೂ ಆಲಿಸಿ, ಸೂಕ್ತ ರೀತಿಯಲ್ಲಿ ಪರಿಶೀಲಿಸಿ ಕೆಎಟಿ ಮಧ್ಯಂತರ ಆದೇಶ ಹೊರಡಿಸಬೇಕು ಎಂದು ನಿರ್ದೇಶಿಸಿದ ಪೀಠ ವಿಚಾರಣೆಯನ್ನು ಎ.4ಕ್ಕೆ ಮುಂದೂಡಿತಲ್ಲದೆ, ಅಲ್ಲಿಯವರೆಗೆ ಕಾಯ್ದೆ ಜಾರಿಗೆ ನೀಡಿದ್ದ ಮಧ್ಯಂತರ ಆದೇಶ ವಿಸ್ತರಿಸಲಾಗುವುದು ಎಂದು ತಿಳಿಸಿತು.







