ಎ.1ರಿಂದ ಪ್ಯಾರಾಸಿಟಮಲ್ ಸೇರಿದಂತೆ 800ಕ್ಕೂ ಅಧಿಕ ಅಗತ್ಯ ಔಷಧಿಗಳ ಬೆಲೆಯಲ್ಲಿ ಶೇ 10.7 ರಷ್ಟು ಹೆಚ್ಚಳ

ಹೊಸದಿಲ್ಲಿ: ತೈಲ ಬೆಲೆಯೇರಿಕೆಯಿಂದ ತತ್ತರಿಸಿರುವ ಶ್ರೀಸಾಮಾನ್ಯನಿಗೆ ಗಾಯದ ಮೇಲೆ ಬರೆಎಳೆದಂತೆ ಅವಶ್ಯಕ ಔಷಧಿ ವಸ್ತುಗಳ ಬೆಲೆಗಳಲ್ಲೂ ಭಾರೀ ಏರಿಕೆಯಾಗುವ ಆತಂಕ ಎದುರಾಗಿದೆ.
ನಿಗದಿತ ಔಷಧಿಗಳ ಮೇಲೆ ಶೇ.10ಕ್ಕೂ ಅಧಿಕ ಬೆಲೆ ಹೆಚ್ಚಿಸಲು ಕೇಂದ್ರ ಸರಕಾರ ಅವಕಾಶ ನೀಡಿರುವ ಹಿನ್ನೆಲೆಯಲ್ಲಿ ನೋವುನಿವಾರಕಗಳು (ಪೆಯಿನ್ ಕಿಲ್ಲರ್), ಆ್ಯಂಟಿಬಯೋಟಿಕ್ಸ್, ಸೋಂಕು ನಿರೋಧಕಗಳು ಸೇರಿದಂತೆ ಅವಶ್ಯಕ ಔಷಧಿ ಸಾಮಾಗ್ರಿಗಳ ದರವು ಏಪ್ರಿಲ್ನಿಂದ ಹೆಚ್ಚಾಗಲಿದೆಯೆಂದು ಅಧಿಕೃತ ಮೂಲಗಳು ಸುಳಿವು ನೀಡಿವೆ. ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯಡಿ ಬರುವ 800ಕ್ಕೂ ಅಧಿಕ ಔಷಧಿಗಳ ದರದಲ್ಲಿ ಏಪ್ರಿಲ್ ತಿಂಗಳಿನಿಂದ ಏರಿಕೆಯಾಗಲಿದೆ ಎಂದು ‘ಇಕನಾಮಿಕ್ ಟೈಮ್ಸ್ ’ ಆರ್ಥಿಕ ಸುದ್ದಿಜಾಲತಾಣ ವರದಿ ಮಾಡಿದೆ.
ಪ್ಯಾರಾಸಿಟಮಲ್, ಅಝಿಥ್ರೊಮೈಸಿನ್ನಂತಹ ಆ್ಯಂಟಿ ಬಯೋಟಿಕ್ಗಳು, ಬ್ಯಾಕ್ಟೀರಿಯಾ ಸೋಂಕುಗಳ ಚಿಕಿತ್ಸೆಗೆ ಬಳಸುವ ಔಷಧಿಗಳು, ಅನಿಮಿಯಾ ನಿರೋಧಕ, ವಿಟಾಮಿನ್ಗಳು ಹಾಗೂ ಖನಿಜಗಳಂತಹ ಔಷಧಿಗಳನ್ನು ಎನ್ಎಲ್ಇಎಂ ಒಳಗೊಂಡಿದೆ. ಸಾಧಾರಣದಿಂದ ಹಿಡಿದು ತೀವ್ರವಾಗಿ ಅಸ್ವಸ್ಥರಾದ ಕೋವಿಡ್19 ರೋಗಿಗಳಿಗೂ ನೀಡಲು ಬಳಸಲಾಗುವ ಕೆಲವು ಔಷಧಿಗಳು ಹಾಗೂ ಸ್ಟಿರಾಯ್ಡಿಗಳು ಕೂಡಾ ಈ ಪಟ್ಟಿಯಲ್ಲಿ ಒಳಗೊಂಡಿವೆ.
ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ದಲ್ಲಿನ ಹೆಚ್ಚಳಕ್ಕೆ ಅನುಗುಣವಾಗಿ ಈ ಏರಿಕೆಯನ್ನು ಮಾಡಲಾಗಿದೆಯೆಂದು ಎನ್ಪಿಎಎ ತಿಳಿಸಿದೆ.
ಪ್ರತಿ ವರ್ಷವೂ ಅಧಿಸೂಚಿತ (ಶೆಡ್ಯೂಲ್ಡ್) ಔಷಧಿಗಳ ದರಗಳನ್ನು ಪರಿಷ್ಕರಿಸಲು ಔಷಧಿ ದರ ನಿಯಂತ್ರಕರಿಗೆ ಅವಕಾಶ ನೀಡಲಾಗುತ್ತದೆ. ಕೊರೋನ ಸಾಂಕ್ರಾಮಿಕದ ಕಾರಣದಿಂದಾಗಿ ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ನಿಭಾಯಿಸಲು ಔಷಧಿಗಳ ದರದಲ್ಲಿ ಗಣನೀಯ ಹೆಚ್ಚಳ ಮಾಡಬೇಕೆಂದು ದೇಶದ ಔಷಧೋದ್ಯಮ ಕೇಂದ್ರ ಸರಕಾರವನ್ನು ನಿರಂತರವಾಗಿ ಆಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೈಗಾರಿಕಾ ತಜ್ಞರ ಪ್ರಕಾರ ಕಳೆದ ಎರಡು ವರ್ಷಗಳಿಗೂ ಅಧಿಕ ಸಮಯದಲ್ಲಿ ಕೆಲವು ಪ್ರಮುಖ ಅಗತ್ಯ ಔಷಧಿ ವಸ್ತುಗಳ ದರಗಳಲ್ಲಿ ಶೇ.15ರಿಂದ ಶೇ.130ರವರೆಗೆ ಹೆಚ್ಚಳವಾಗಿದ್ದು, ಪ್ಯಾರಾಸಿಟಮಲ್ ದರದಲ್ಲಿ ಶೇ.130ರಷ್ಟು ಏರಿಕೆಯಾಗಿದೆ.
ಔಷಧಿಗಳ ತಯಾರಿಕೆಗೆ ಬಳಸಲಾಗುವ ಪೂರಕ ವಸ್ತುಗಳ ದರಗಳಲ್ಲಿಯೂ ಶೇ.18ರಿಂದ ಶೇ.262ರವರೆಗೆ ಏರಿಕೆಯಾಗಿದೆ.
ಗ್ಲಿಸರಿನ್ ಹಾಗೂ ಪ್ರೊಪೆಲಿನ್ ಗ್ಲೈಕೊಲ್, ಸಿರಪ್ಗಳು, ಓರಲ್ ಡ್ರಾಪ್ಗಳು ಹಾಗೂ ಸ್ಟರೈಲ್ಗಳ ತಯಾರಿಗೆ ಬಳಸಲಾಗುವ ದ್ರಾವಕಗಳ ದರ ಈಗ ಕ್ರಮವಾಗಿ ಶೇ.83ರಿಂದ ಶೇ.263ರಷ್ಟು ಏರಿಕೆಯಾಗಿರುವುದು ತಮಗೆ ಹೊರೆಯಾಗಿ ಪರಿಣಮಿಸಿದೆಯೆಂದು ಔಷಧ ತಯಾರಕ ಸಂಸ್ಥೆಗಳು ಹೇಳಿಕೊಳ್ಳುತ್ತಿವೆ.
1 ಸಾವಿರಕ್ಕೂ ಅಧಿಕ ಭಾರತೀಯ ಫಾರ್ಮಾಸ್ಯೂಟಿಕಲ್ ತಯಾರಕರನ್ನು ಪ್ರತಿನಿಧಿಸುವ ಗುಂಪೊಂದು ಎಲ್ಲಾ ನಿಗದಿತ(ಶೆಡ್ಯೂಲ್ಡ್) ಔಷಧಿ ಸಂಯೋಜಕಗಳ ದರಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಶೇ.10ರಷ್ಟು ಹೆಚ್ಚಿಸಲು ಅವಕಾಶ ನೀಡಬೇಕೆಂದು ನವೆಂಬರ್ ತಿಂಗಳ ಆರಂಭದಲ್ಲಿ ಕೇಂದ್ರ ಸರಕಾರವನ್ನು ಆಗ್ರಹಿಸಿತ್ತು. ನಿಗದಿಪಡಿಸಿರದ (ನಾನ್ಶೆಡ್ಯೂಲ್ಡ್) ಔಷಧಿಗಳ ದರದಲ್ಲೂ ಶೇ.20ರಷ್ಟು ಏರಿಕೆಯಾಗಬೇಕೆಂದು ಅದು ಒತ್ತಾಯಿಸಿತ್ತು.
ದರ ನಿಯಂತ್ರಣದ ವ್ಯಾಪ್ತಿಗೆ ಬರುವ ಹಲವಾರು ಔಷಧಿಗಳ ಪ್ರಮಾಣವು ಒಟ್ಟು ಔಷಧ ಮಾರುಕಟ್ಟೆಯ ಶೇ.16ರಷ್ಟಿದ್ದು, ದರ ಪರಿಷ್ಕರಣೆಯಿಂದಾಗಿ ಅವುಗಳ ಬೆಲೆಯಲ್ಲಿ ಶೇ.10ರಷ್ಟು ಏರಿಕೆಯಾಗಲಿದೆ ಎಂದು ರೋಗಿಗಳ ಹಕ್ಕುಗಳ ಕುರಿತ ಸಂಘಟನೆಯಾದ ಆಲ್ ಇಂಡಿಯಾ ಡ್ರಗ್ ಆ್ಯಕ್ಷನ್ ನೆಟ್ವರ್ಕ್ (ಏಐಡಿಎ ಎನ್)ನಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸುತ್ತಿರುವ ಚಿನು ಶ್ರೀನಿವಾಸನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.







