ಸಂಸತ್ತಿನಲ್ಲಿ ಮಹಿಳಾ ಪ್ರಾತಿನಿಧ್ಯದ ಕೊರತೆ: ಮುಖ್ಯ ಚುನಾವಣಾ ಆಯುಕ್ತ

ಹೊಸದಿಲ್ಲಿ, ಮಾ.26: ಸಂಸತ್ತಿನಲ್ಲಿ ಮಹಿಳೆಯರ ಪ್ರಾತಿನಿಧ್ಯದ ಕೊರತೆಯ ಬಗ್ಗೆ ಶನಿವಾರ ಇಲ್ಲಿ ಬೇಸರ ವ್ಯಕ್ತಪಡಿಸಿದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲಚಂದ್ರ ಅವರು,ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ ಮಹಿಳಾ ಮತದಾರರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಬೆಟ್ಟು ಮಾಡಿದರು.
ಸಂಸತ್ತಿನಲ್ಲಿ ಕಲಾಪಗಳಿಗೆ ವ್ಯತ್ಯಯಗಳ ಬಗ್ಗೆಯೂ ಕಳವಳ ವ್ಯಕ್ತಪಡಿಸಿದ ಅವರು ಇದು ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದರು.
ಸಂಸದ ರತ್ನ ಪ್ರಶಸ್ತಿಗಳ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸುಶೀಲಚಂದ್ರ,ಪ್ರಥಮ ಲೋಕಸಭೆಯು 15 ಮಹಿಳಾ ಸಂಸದರನ್ನು ಹೊಂದಿದ್ದರೆ 17ನೇ ಲೋಕಸಭೆಯು 78 ಮಹಿಳಾ ಸಂಸದರನ್ನು ಹೊಂದಿದೆ. ಆದರೆ ಈ ವಿಷಯದಲ್ಲಿ ಬೆಳವಣಿಗೆ ಮಾತ್ರ ಈಗಲೂ ಮಂದಗತಿಯಲ್ಲಿದೆ ಎಂದರು.
ಸಂವಿಧಾನವು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ಖಾತರಿಪಡಿಸಿದೆ ಎಂದು ಬೆಟ್ಟು ಮಾಡಿದ ಅವರು, ತಳಮಟ್ಟದಲ್ಲಿ ಹಲವಾರು ಮಹಿಳಾ ನಾಯಕಿಯರು ತಮ್ಮ ನಾಯಕತ್ವ ಗುಣಗಳನ್ನು ಪ್ರದರ್ಶಿಸಿದ್ದಾರೆ ಮತ್ತು ತಮ್ಮ ಸಮುದಾಯಗಳಲ್ಲಿ ಗಮನಾರ್ಹ ಬದಲಾವಣೆಗಳನ್ನು ತಂದಿದ್ದಾರೆ ಎಂದರು.
ಸಂಸದೀಯ ಕಲಾಪಗಳಿಗೆ ವ್ಯತ್ಯಯಗಳ ಕುರಿತಂತೆ ಅವರು, ವಾದಗಳು, ಚರ್ಚೆಗಳು ಮತ್ತು ಭಾಷಣಗಳು ಸದೃಢ ಸಂಸತ್ತಿನ ಮಾನದಂಡಗಳಾಗಿವೆ,ಆದರೆ ಪದೇ ಪದೇ ವ್ಯತ್ಯಯಗಳು, ಸಭಾತ್ಯಾಗಗಳು ಮತ್ತು ಉಪವಾಸ ಮುಷ್ಕರಗಳಲ್ಲ. ಈ ಎಲ್ಲ ವರ್ಷಗಳಲ್ಲಿ ಕಲಾಪಗಳಿಗೆ ವ್ಯತ್ಯಯಗಳಿಂದಾಗಿ ಸಮಯ ನಷ್ಟದ ಪ್ರಮಾಣದಲ್ಲಿ ನಾಟಕೀಯ ಏರಿಕೆ ಕಂಡು ಬಂದಿದೆ,ಕೆಲವು ಅಧಿವೇಶನಗಳು ಯಾವುದೇ ಕಲಾಪ ನಡೆಸದೆ ವ್ಯರ್ಥಗೊಂಡಿವೆ ಮತ್ತು ಇವು ಸದೃಢ ಸಂಸದೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ ಎಂದು ಹೇಳಿದರು.
ಸಂಸತ್ ಕಲಾಪಗಳಲ್ಲಿ ಪಾಲ್ಗೊಳ್ಳುವಿಕೆ,ಪ್ರಶ್ನೆವೇಳೆ ಮತ್ತು ಶೂನ್ಯವೇಳೆಯಲ್ಲಿ ಮಹತ್ವದ ವಿಷಯಗಳನ್ನೆತ್ತುವುದು ಇವೆಲ್ಲ ಸ್ಥಾಪಿತ ಸಂಸದೀಯ ಪರಿಪಾಠಗಳಾಗಿವೆ. ನಾಟಕೀಯ ವಿದ್ಯಮಾನಗಳು ಅಥವಾ ಘೋಷಣೆಗಳನ್ನು ಕೂಗುವುದು ಅಥವಾ ಸದನದ ಬಾವಿಗೆ ನುಗ್ಗುವ ಮೂಲಕ ಈ ಅಮೂಲ್ಯ ಅವಕಾಶವನ್ನು ವ್ಯರ್ಥಗೊಳಿಸಬಾರದು ಎಂದು ಅವರು ಹೇಳಿದರು.
ಸಂಸದೀಯ ಸ್ಥಾಯಿ ಸಮಿತಿಗಳ ಸಭೆಗಳಲ್ಲಿ ಹಾಜರಾತಿ ಕ್ಷೀಣಿಸುತ್ತಿರುವುದು ಕಳವಳದ ವಿಷಯವಾಗಿದೆ. ಸಂಸದರು ಉತ್ಸಾಹದಿಂದ ಮತ್ತು ನಿಷ್ಪಕ್ಷ ರೀತಿಯಲ್ಲಿ ಸಭೆಗಳಲ್ಲಿ ಭಾಗಿಯಾಗಬೇಕು ಎಂದರು.
ಚುನಾವಣೆಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಕುರಿತಂತೆ ಇತ್ತೀಚಿನ ಪಂಚರಾಜ್ಯ ಚುನಾವಣೆಗಳ ದತ್ತಾಂಶಗಳನ್ನು ಹಂಚಿಕೊಂಡ ಸುಶೀಲಚಂದ್ರ,ಗೋವಾ,ಉತ್ತರಾಖಂಡ,ಮಣಿಪುರ ಮತ್ತು ಉತ್ತರ ಪ್ರದೇಶಗಳಲ್ಲಿ ಪುರುಷರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತಗಳನ್ನು ಚಲಾಯಿಸಿದ್ದಾರೆ ಮತ್ತು ಪಂಜಾಬಿನಲ್ಲಿ ಪುರುಷ ಮತ್ತು ಮಹಿಳಾ ಮತದಾರರ ಸಂಖ್ಯೆ ಸುಮಾರಾಗಿ ಸಮಾನವಾಗಿತ್ತು. ಎಲ್ಲ ಐದು ರಾಜ್ಯಗಳಲ್ಲಿ ಲಿಂಗಾನುಪಾತವು ಏರಿಕೆಯಾಗಿದ್ದು, ಉ.ಪ್ರದೇಶವೊಂದರಲ್ಲಿಯೇ ಅದು 29 ಅಂಶಗಳಷ್ಟು ಏರಿಕೆಯಾಗಿದೆ ಎಂದರು. 1951ರಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದಾಗ ದೇಶದಲ್ಲಿ 17.3 ಕೋ.ಮತದಾರರಿದ್ದರು ಮತ್ತು ಶೇ.45.6ರಷ್ಟು ಮತದಾನವಾಗಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಸುಮಾರು 91.2 ಕೋ.ಮತದಾರರಿದ್ದು,ಶೇ.66.4ರಷ್ಟು ದಾಖಲೆಯ ಪ್ರಮಾಣದಲ್ಲಿ ಮತದಾನವಾಗಿತ್ತು ಎಂದು ತಿಳಿಸಿದ ಅವರು,ಇಂದು ದೇಶದಲ್ಲಿ 95.3 ಕೋ.ಗೂ ಅಧಿಕ ಮತದಾರರಿದ್ದು,ಇವರಲ್ಲಿ 49.04 ಕೋ.ಪುರುಷರು ಮತ್ತು 46.09 ಕೋ.ಮಹಿಳೆಯರು ಸೇರಿದ್ದಾರೆ ಎಂದರು.







