ಸಂಜಯಗಾಂಧಿ ಆಸ್ಪತ್ರೆಯಲ್ಲಿ ಬೆನ್ನು ಮೂಳೆಗೆ ಶಸ್ತ್ರ ಚಿಕಿತ್ಸೆ ಆರಂಭ: ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.26: ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ಸಂಜಯಗಾಂಧಿ ಆಸ್ಪತ್ರೆಯಲ್ಲಿ ಬೆನ್ನು ಮೂಳೆಗೆ ಶಸ್ತ್ರ ಚಿಕಿತ್ಸೆ ನೀಡಲು ರುಮಟಾಲಜಿ ಕ್ಲಿನಿಕ್ ತೆರೆಯಲಾಗಿದ್ದು, ಸಾರ್ವಜನಿಕರಿಗೆ ಉಚಿತವಾಗಿ ಚಿಕಿತ್ಸೆ ಪ್ರಾರಂಭವಾಗಿದೆ.
ಇಂದು ಸಂಜಯಗಾಂಧಿ ಟ್ರಾಮ ಮತ್ತು ಅಸ್ಥಿಚಿಕಿತ್ಸಾ ಸಂಸ್ಥೆ ಆಸ್ಪತ್ರೆಯ ಬೆನ್ನು ಹುರಿ ವಿಭಾಗ ಮತ್ತು ಬೆಂಗಳೂರು ರುಮಟಾಲಜಿ ಅಸೋಸಿಯೇಷನ್ ಆಯೋಜಿಸಿದ್ದ ಸಮಾರಂಭದಲ್ಲಿ ಚಾಲನೆ ನೀಡಲಾಯಿತು. ಪ್ರತಿ ತಿಂಗಳ ಎರಡನೇ ಶುಕ್ರವಾರ ಬೆಳಗ್ಗೆ 9.00 ರಿಂದ 11.00 ಗಂಟೆಯವರೆಗೆ ಚಿಕಿತ್ಸೆ ನೀಡಲಾಗುವುದು.
ಕಾರ್ಪೊರೇಟ್ ಆಸ್ಪತ್ರೆಯಲ್ಲಿ ಬೆನ್ನು ಹುರಿ ಚಿಕಿತ್ಸೆಗೆ ಸುಮಾರು 5 ಲಕ್ಷಗಳಷ್ಟು ವೆಚ್ಚವಾಗುತ್ತದೆ. ಸಂಜಯಗಾಂಧಿ ಆಸ್ಪತ್ರೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಶಸ್ತ್ರಚಿಕಿತ್ಸೆ ದೊರೆಯಲಿದೆ.
ಬೆನ್ನು ಹುರಿ ಹಾಗೂ ನರದ ವಿಭಾಗದಲ್ಲಿ ಎಲ್ಲಾ ರೀತಿಯ ಬೆನ್ನು ನೋವಿನ ಸಂಬಂಧಪಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಬೆನ್ನಿನ ಕಾಯಿಲೆಗಳಾದ ಡಿಸ್ಕ್ ಸಮಸ್ಯೆಗಳು, ವಯಸ್ಸಾದಂತಹ ಬೆನ್ನುಹುರಿ ನರದ ಸಮಸ್ಯೆಗಳಾದ ಸ್ಪಾಂಡಿಲೋಸಿಸ್ ಸ್ಪೈನಲ್ ಕೆನಾಲ್ ಸ್ಟೆನೋಸಿಸ್, ಸ್ಪಾಂಡಿಲೋಲಿಸ್ಥೆಸಿಸ್, ಟ್ಯೂಮರ್ ಹಾಗೂ ಕ್ಯಾನ್ಸರ್ ರೋಗಗಳಿಗೆ ಸೂಕ್ತವಾದ ಚಿಕಿತ್ಸೆ ದೊರೆಯಲಿದೆ ಎಂದು ಸಂಜಯಗಾಂಧಿ ಆಸ್ಪತ್ರೆಯ ಬೆನ್ನು ಹುರಿ ವಿಭಾಗದ ಡಾ. ಮೋಹನ್ ಎನ್.ಎಸ್. ತಿಳಿಸಿದ್ದಾರೆ.
ಬೆನ್ನು ಮೂಳೆ ಶಸ್ತ್ರ ಚಿಕಿತ್ಸೆಯಲ್ಲಿ ಕ್ಲಿಷ್ಟಕರವಾದ ವಕ್ರಬೆನ್ನು ಶಸ್ತ್ರ ಚಿಕಿತ್ಸೆಯಲ್ಲಿ ಸ್ಕೋಲಿಯೋಸಿಸ್ ಸರಿಪಡಿಸಲಾಗುವುದು. ನಮ್ಮ ಆಸ್ಪತ್ರೆ ಸುಸಜ್ಜಿತವಾದ ಬೆನ್ನು ಹುರಿ ಹೊರರೋಗಿ ವಿಭಾಗ, ಫಿಜಿಯೋಥೆರಪಿ ವಿಭಾಗ, ಮಾಡ್ಯುಲರ್ ಆಪರೇಷನ್ ಥಿಯೇಟರ್ನಲ್ಲಿ ಅತ್ಯಾಧುನಿಕ ಸಿ-ಆರ್ಮ್, ಮೈಕ್ರೋಸ್ಕೋಪ್, ನ್ಯೂರೋ ಮಾನಿಟರ್ಗಳಂತಹ ಸೌಲಭ್ಯಗಳನ್ನು ಒಳಗೊಂಡಿದೆ ಎಂದರು.







