ಪತ್ರಿಕೆಗಳಲ್ಲಿ ವಿಮರ್ಶೆ ಪ್ರಕಟವಾಗದ ಕಾರಣ ಹೊಸ ಕೃತಿಗಳ ಮಾಹಿತಿ ತಿಳಿಯುತ್ತಿಲ್ಲ: ಜಿ.ಎನ್. ರಂಗನಾಥ ರಾವ್

ಬೆಂಗಳೂರು, ಮಾ.26: ಸಾಮಾನ್ಯವಾಗಿ ಹೊಸ ಕೃತಿಗಳ ಬಗ್ಗೆ ಪತ್ರಿಕೆಗಳಲ್ಲಿ ಪ್ರಕಟವಾಗುವ ವಿಮರ್ಶೆಗಳಿಂದ ತಿಳಿಯುತ್ತಿತ್ತು. ಆದರೆ ಪತ್ರಿಕೋದ್ಯಮ ಕಾರ್ಪೊರೇಟ್ ಉದ್ಯಮವಾಗಿ ಬದಲಾದ ಕಾರಣ, ವಿಮರ್ಶೆಗಳು ಕಡಿಮೆಯಾಗಿ ಕೃತಿಗಳ ಬಗ್ಗೆ ತಿಳಿಯುತ್ತಿಲ್ಲ ಎಂದು ಲೇಖಕ ಮತ್ತು ಅಂಕಣಕಾರ ಜಿ.ಎನ್. ರಂಗನಾಥ ರಾವ್ ಬೇಸರ ವ್ಯಕ್ತಪಡಿಸಿದರು.
ಶನಿವಾರ ಸರಳಾ ರಂಗನಾಥರಾವ್ ಸ್ಮಾರಕ ಪ್ರತಷ್ಠಾನವು ನಗರದ ಭಾರತೀಯ ವಿದ್ಯಾಭವನದ ಕೆ.ಆರ್.ಜಿ. ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾರು ಓದುಗರಿಲ್ಲ ಎಂಬಂತೆ ಪತ್ರಿಕೆಗಳಲ್ಲಿ ವಿಮರ್ಶೆ ಒಂದು ಅಪರೂಪದ ಸಂಗತಿಯಾಗುತ್ತಿದೆ. ಈ ಕಾರ್ಪೊರೇಟ್ ಕಾಲಕ್ಕನುಗುಣವಾಗಿ ನಾವು ಅನಿವಾರ್ಯವಾಗಿ ಬದಲಾಗುತ್ತಿದ್ದೇವೆ ಎಂದು ಹೇಳಿದರು.
ಕಥೆಗಾರ್ತಿ ಶಾಂತಿ ಕೆ. ಅಪ್ಪಣ್ಣ ಮಾತನಾಡಿ, ಸಮಾಜವನ್ನು ಅಂತಃಕರಣದಿಂದ ನೋಡಿದರೆ ಮಾತ್ರ ಅದು ಗ್ರಹಿಕೆಗೆ ಸರಿಯಾಗಿ ಸಿಗುವಂತಾಗುತ್ತದೆ. ಬರಹಗಾರನಾದವನು ಜಾತ್ಯತೀತ ಹಾಗೂ ಪಕ್ಷಾತೀತನಾಗಬೇಕು. ಇಲ್ಲವಾದರೆ ಸಮಾಜದ ಒಂದು ಭಾಗವು ಕುರುಡಾಗಿ ಉಳಿದುಬಿಡುತ್ತದೆ ಎಂದರು.
ಕೃತಿಗಳು ಓದುಗರನ್ನು ತಲುಪಲಿರುವ ಮಾನದಂಡವೇ ಪ್ರಶಸ್ತಿಯಾಗಿರುತ್ತದೆ. ಆದರೆ ಲೇಖಕ ಪ್ರಶಸ್ತಿಗೆ ಖುದ್ದು ಅರ್ಜಿ ಹಾಕುವುದಕ್ಕಿಂತ ಪ್ರಕಾಶಕರ ಮೂಲಕ ಪ್ರಶಸ್ತಿಗಳಿಗೆ ಅರ್ಜಿ ಸಲ್ಲಿಸುವಂತಾಗಬೇಕು ಎಂದು ಅವರು ಆಶಿಸಿದರು.
ಕಾರ್ಯಕ್ರಮದಲ್ಲಿ ‘2020ನೇ ಸಾಲಿನ ಸರಳಾ ರಂಗನಾಥ ರಾವ್ ಪ್ರಶಸ್ತಿ’ಯನ್ನು ಶಾಂತಿ ಕೆ. ಅಪ್ಪಣ್ಣರಿಗೆ ನೀಡಿ ಗೌರವಿಸಲಾಯಿತು. ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಚಿಂತಾಮಣಿ ಕೊಡ್ಲೆಕೆರೆ, ಕೆ.ಸತ್ಯನಾರಾಯಣ, ಹಿರಿಯ ಪತ್ರಕರ್ತ ಸತೀಶ್ ಚಪ್ಪರಿಕೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.







