ತೀರ್ಥಹಳ್ಳಿ: ಗುಂಡೇಟು ತಗುಲಿ ಬಿಜೆಪಿ ಮುಖಂಡ ಸಾವು

ಮೃತ ಬಿಜೆಪಿ ಮುಖಂಡ ಕಾಂತರಾಜ್ | ಗೃಹಸಚಿವ ಭೇಟಿ
ತೀರ್ಥಹಳ್ಳಿ, ಮಾ.26: ಗುಂಡು ತಗುಲಿ ಬಿಜೆಪಿ ಮುಖಂಡರೊಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.
ಮೃತರನ್ನು ಮೇಲಿನಕೊಪ್ಪ ಬಿಜೆಪಿ ಮುಖಂಡ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕಾಂತರಾಜ್ (44) ಎಂದು ಗುರುತಿಸಲಾಗಿದೆ.
ಘಟನೆ ಹಿನ್ನಲೆ: ತೀರ್ಥಹಳ್ಳಿ ತಾಲೂಕಿನ ಅಂಬುತೀರ್ಥ ಬಳಿ ಕಾಂತರಾಜ್ ಪ್ರಾಣಿ ಶಿಕಾರಿಗೆ ತೆರಳಿದ್ದಾರೆ ಎನ್ನಲಾಗಿದೆ.ಈ ವೇಳೆ ಬಂದೂಕಿನಿಂದ ಹಾರಿದ ಗುಂಡಿಗೆ ಕಾಂತರಾಜು ಅವರು ಗಂಭೀರವಾಗಿ ಗಾಯಗೊಂಡಿದ್ದರು ಎಂದು ಹೇಳಲಾಗಿದ್ದು, ಅಂಬುತೀರ್ಥ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಕಾಂತರಾಜ್ ನೋವಿನಿಂದ ಚೀರಾಡುತ್ತಿದ್ದನ್ನು ಗಮನಿಸಿದ ಸ್ಥಳೀಯರು ಕೂಡಲೇ ಅವರನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಈ ವೇಳೆ ದಾರಿ ಮಧ್ಯೆ ಕಾಂತರಾಜ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.
ಗೃಹಸಚಿವರ ಭೇಟಿ: ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಜೆಸಿ ಆಸ್ಪತ್ರೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಭೇಟಿ ನೀಡಿದರು.
ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಅಂತಿಮ ದರ್ಶನ ಪಡೆದುಕೊಂಡರು. ಬಿಜೆಪಿ ಮುಖಂಡರು, ಅಧಿಕಾರಿಗಳೊಂದಿಗೆ ಗೃಹ ಸಚಿವ ಆರಗ ಚರ್ಚಿಸಿದರು. ಶವ ಪರೀಕ್ಷೆ ಕುರಿತಾಗಿ ಕ್ರಮ ಕೈಗೊಳ್ಳಲು ಸೂಚನೆ ನೀಡಿದ್ದಾರೆ.







