ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸದ ಹಿನ್ನೆಲೆ: ಪೊಲೀಸರ ವಿರುದ್ಧ ಹೈಕೋರ್ಟ್ ಅಸಮಾಧಾನ

ಬೆಂಗಳೂರು, ಮಾ.26: ಹತ್ಯೆಗೈದ ಪ್ರಕರಣದ ಆರೋಪಿಗಳನ್ನು ಬಂಧಿಸದ ಶಿಡ್ಲಘಟ್ಟ ಠಾಣೆ ಪೊಲೀಸ್ ಇನ್ಸ್‍ಪೆಕ್ಟರ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ತನಿಖೆ ಚುರುಕುಗೊಳಿಸುವಂತೆ ಇನ್ಸ್‍ಪೆಕ್ಟರ್ ಮತ್ತು ಚಿಕ್ಕಬಳ್ಳಾಪುರ ಎಸ್ಪಿಗೆ ತಾಕೀತು ಮಾಡಿದೆ.
ಪತಿ ನವೀನ್ ಕುಮಾರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿಲ್ಲ ಎಂದು ಆಕ್ಷೇಪಿಸಿ ಶಿಡ್ಲಘಟ್ಟದ ಗಿಡ್ಡನಹಳ್ಳಿ ನಿವಾಸಿ ಅಖಿಲಾ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಕೆ.ಎನ್ ನಟರಾಜನ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ, ಕೊಲೆಯಾಗಿದ್ದಾರೆ ಎನ್ನಲಾದ ವ್ಯಕ್ತಿಯ ಮೃತದೇಹದ ಮೇಲೆ ಗಾಯ ಮತ್ತು ದಾರ ಕಟ್ಟಿರುವ ಗುರುತುಗಳು ಮರಣೋತ್ತರ ಪರೀಕ್ಷೆಯಲ್ಲಿ ಪತ್ತೆಯಾಗಿವೆ. ಪ್ರಕರಣದ ಆರೋಪಿಗಳು ಜೀವ ಬೆದರಿಕೆ ಹಾಕಿರುವುದಾಗಿ ಅಖಿಲಾ ದೂರಿನಲ್ಲಿ ಹೇಳಿದ್ದಾರೆ. ಹೀಗಿದ್ದರೂ ಶಿಡ್ಲಘಟ್ಟ ಪೊಲೀಸ್ ಠಾಣೆ ಇನ್ಸ್‍ಪೆಕ್ಟರ್ ಮಾತ್ರ ಯಾವೊಬ್ಬ ಆರೋಪಿಯನ್ನು ಬಂಧಿಸಲು ಕ್ರಮ ಕೈಗೊಂಡಿಲ್ಲ. ಪ್ರಕರಣವನ್ನು ತನಿಖೆ ಮಾಡುತ್ತಿರುವುದಾಗಿ ಸರಕಾರಿ ವಕೀಲರು ಹೇಳುತ್ತಿದ್ದಾರೆ.
ಆದರೆ, ಈ ಕುರಿತಂತೆ ಯಾವ ದಾಖಲೆಯನ್ನೂ ನ್ಯಾಯಾಲಯಕ್ಕೆ ಒದಗಿಸಿಲ್ಲ. ಕೊಲೆ ಪ್ರಕರಣದಲ್ಲಿ ವಾರೆಂಟ್ ಇಲ್ಲದಿದ್ದರೂ ಆರೋಪಿಗಳನ್ನು ಪೊಲೀಸ್ ಅಧಿಕಾರಿಗಳು ಬಂಧಿಸಬಹುದು. ಹೀಗಿದ್ದೂ, ಪೊಲೀಸರು ಕಾನೂನು ಕ್ರಮ ಜರುಗಿಸದಿರುವುದು ಕರ್ತವ್ಯ ಲೋಪವಲ್ಲದೆ ಮತ್ತೇನು ಅಲ್ಲ. ಹೀಗಾಗಿ ಪ್ರಕರಣದ ತನಿಖೆ ಚುರುಕುಗೊಳಿಸಬೇಕು ಹಾಗೂ ಕಾನೂನು ಪ್ರಕಾರ ಅಂತಿಮ ವರದಿ ಸಲ್ಲಿಸಬೇಕು ಎಂದು ಪೊಲೀಸರಿಗೆ ತಾಕೀತು ಮಾಡಿದೆ.
ಪತಿ ನವೀನ್ ಕುಮಾರ್ ಮೃತದೇಹ ಮಾವಿನ ತೋಪಿನಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ದುಷ್ಕರ್ಮಿಗಳು ನನ್ನ ಗಂಡನನ್ನು ಕೊಲೆ ಮಾಡಿ, ನಂತರ ಆತ್ಮಹತ್ಯೆ ಎಂದು ಬಿಂಬಿಸಲು ಮಾವಿನ ಮರಕ್ಕೆ ನೇತು ಹಾಕಿದ್ದಾರೆ. ಈ ಕುರಿತಂತೆ 2021ರ ಜುಲೈ 12ರಂದು ಕೊಲೆ ಪ್ರಕರಣ ದಾಖಲಿಸಿದ್ದರೂ ಶಿಡ್ಲಘಟ್ಟ ಠಾಣೆ ಪೊಲೀಸರು ಸಮರ್ಪಕ ತನಿಖೆ ನಡೆಸುತ್ತಿಲ್ಲ. ಈವರೆಗೂ ಯಾವೊಬ್ಬ ಆರೋಪಿಯನ್ನೂ ಬಂಧಿಸಿಲ್ಲ ಎಂದು ಅಖಿಲಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹಾಗೆಯೇ, ಸಮರ್ಪಕ ತನಿಖೆ ನಡೆಸಲು ಮತ್ತು ಆರೋಪಿಗಳನ್ನು ಬಂಧಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿದ್ದರು.







