ಬೆಂಗಳೂರಿನಲ್ಲಿ ಎರಡು ಪ್ರತ್ಯೇಕ ಪ್ರಕರಣ: ಪತಿಯರಿಂದಲೇ ಪತ್ನಿಯರ ಹತ್ಯೆ
ಆರೋಪಿಗಳ ಬಂಧನ

ಸಾಂದರ್ಭಿಕ ಚಿತ್ರ
ಬೆಂಗಳೂರು, ಮಾ.26: ನಗರದಲ್ಲಿ ಇಬ್ಬರು ಮಹಿಳೆಯರ ಹತ್ಯೆಯಾಗಿದ್ದು, ಒಂದು ಪ್ರಕರಣದಲ್ಲಿ ತವರಿನಿಂದ ಹಣ, ಆಭರಣ ತರುವಂತೆ ಪತಿಯೇ ಪತ್ನಿಯನ್ನು ಕೊಲೆ ಮಾಡಿದರೆ, ಮತ್ತೊಂದು ಪ್ರಕರಣದಲ್ಲಿ ಬೊಬೈಲ್ನಲ್ಲಿ ಹೆಚ್ಚು ಹೊತ್ತು ಬೇರೆಯವರೊಂದಿಗೆ ಮಾತನಾಡುತ್ತೀಯ ಎಂದು ಪತಿ ಜಗಳ ತೆಗೆದು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಈ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಚಾಕುವಿನಿಂದ ಇರಿದು ಹತ್ಯೆ: ಯಾವಾಗಲೂ ಮೊಬೈಲ್ನಲ್ಲಿ ಮಾತನಾಡುತ್ತೀಯ ಎಂದು ಪತ್ನಿ ಜತೆ ಜಗಳವಾಡಿದ ಪತಿ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ರಾಮಮೂರ್ತಿನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.
ಮೃತರನ್ನು ನೇಪಾಳ ಮೂಲದ ಕಮಲಾದೇವಿ(45) ಎಂದು ಗುರುತಿಸಲಾಗಿದೆ. ಈಕೆ ಪತಿ ತೇಜ್ ಬಹದ್ದೂರ್(52)ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ನೇಪಾಳ ಮೂಲದ ಈ ದಂಪತಿ 20 ವರ್ಷದ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದು, ಮೊದಲು ಸಂಜಯನಗರದಲ್ಲಿ ವಾಸವಾಗಿದ್ದು, ಕಳೆದ ಮೂರು ವರ್ಷಗಳ ಹಿಂದೆ ಮನೆ ಬದಲಿಸಿ ಬಿ.ಚನ್ನಸಂದ್ರದಲ್ಲಿ ವಾಸವಾಗಿದ್ದು, ಇವರಿಗೆ ಒಬ್ಬ ಮಗ ಹಾಗೂ ಮಗಳಿದ್ದು, ಮಗಳನ್ನು ಮದುವೆ ಮಾಡಿಕೊಡಲಾಗಿದೆ.
ಕಮಲಾದೇವಿ ಆಗಾಗ್ಗೆ ಬೇರೆಯವರೊಂದಿಗೆ ಮೊಬೈಲ್ನಲ್ಲಿ ಮಾತನಾಡುವುದನ್ನು ಗಮನಿಸಿದ ಪತಿ ಈ ವಿಚಾರವಾಗಿ ಜಗಳವಾಡಿದ್ದಾನೆ. ಶನಿವಾರ ಮಗ ಕೆಲಸಕ್ಕೆ ಹೋಗಿದ್ದಾಗ ಇದೇ ವಿಚಾರವಾಗಿ ದಂಪತಿ ನಡುವೆ ಜಗಳವಾಗಿದೆ. ಆ ಸಂದರ್ಭದಲ್ಲಿ ತೇಜ್ ಬಹದ್ದೂರ್ ಅಡುಗೆ ಮನೆಯಲ್ಲಿದ್ದ ಚಾಕು ತೆಗೆದುಕೊಂಡು ಪತ್ನಿ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ. ರಾಮಮೂರ್ತಿನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿ ಶವವನ್ನು ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿ ಆರೋಪಿ ತೇಜ್ ಬಹದ್ದೂರ್ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕುತ್ತಿಗೆ ಬಿಗಿದು ಹತ್ಯೆ: ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿ, ಹೃದಯಾಘಾತವಾಗಿದೆ ಎಂದು ಬಿಂಬಿಸಿದ್ದ ಕಾರು ಚಾಲಕನನ್ನು ಬ್ಯಾಡರಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೃತರನ್ನು ಸುಂಕದಕಟ್ಟೆಯ ನಿವಾಸಿ ಸೌಮ್ಯಾ(25) ಎಂದು ಗುರುತಿಸಲಾಗಿದೆ. ಈಕೆಯ ಪತಿ ಯೋಗೇಶ್(25) ಪೊಲೀಸರ ವಶದಲ್ಲಿರುವ ಆರೋಪಿ. ಮೂಲತಃ ನಾಗಮಂಗಲ ಸಮೀಪದ ಬೆಳ್ಳೂರು ಕ್ರಾಸ್ ನಿವಾಸಿ ಯೋಗೇಶ್ ಕಾರು ಚಾಲಕ ವೃತ್ತಿ ಮಾಡುತ್ತಿದ್ದು, ಮೂರು ವರ್ಷದ ಹಿಂದೆ ಮಂಚೇನಹಳ್ಳಿಯ ನಿವಾಸಿ ಸೌಮ್ಯಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದು, ಮುನೇಶ್ವರನಗರದಲ್ಲಿ ವಾಸವಾಗಿದ್ದರು.
ತವರಿನಿಂದ 2 ಲಕ್ಷ ಹಣ ತರುವಂತೆ ಕಳೆದ ಮೂರು ದಿನಗಳಿಂದಲೂ ಸೌಮ್ಯಾ ಜೊತೆಯಲ್ಲಿ ಯೋಗೇಶ್ ಜಗಳವಾಡುತ್ತಿದ್ದನು. ಶನಿವಾರ ಸಂಜೆ 5.30ರ ಸುಮಾರಿನಲ್ಲಿ ಮತ್ತೆ ಇದೇ ವಿಚಾರವಾಗಿ ಪತ್ನಿ ಜೊತೆ ಜಗಳವಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗಿದಾಗ ಒಂದು ಹಂತದಲ್ಲಿ ಕೈಗೆ ಸಿಕ್ಕಿದ ವೇಲ್ನಿಂದ ಸೌಮ್ಯಾಳ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ
ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಬ್ಯಾಡರಹಳ್ಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆ ವೇಳೆ ಸೌಮ್ಯಾ ತಾಯಿ ಮಗಳ ಸಾವಿನ ಬಗ್ಗೆ ಅನುಮಾನವಿದೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಆ ಸಂದರ್ಭದಲ್ಲಿ ಯೋಗೇಶನನ್ನು ವಿಚಾರಣೆ ಮಾಡಿದಾಗ ಸೌಮ್ಯಾಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ. ಈ ಮೊಕದ್ದಮೆ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.







