2.26 ಲ.ಕ್ಕೂ ಅಧಿಕ ಪೊಕ್ಸೊ ಪ್ರಕರಣಗಳು ತ್ವರಿತ ನ್ಯಾಯಾಲಯಗಳಲ್ಲಿ ಬಾಕಿ: ಸರಕಾರ

ಹೊಸದಿಲ್ಲಿ, ಮಾ.26: ವಿಶೇಷ ಪೊಕ್ಸೊ ನ್ಯಾಯಾಲಯಗಳು ಸೇರಿದಂತೆ ತ್ವರಿತ ವಿಶೇಷ ನ್ಯಾಯಾಲಯಗಳಲ್ಲಿ ಈ ವರ್ಷದ ಜನವರಿ ಅಂತ್ಯದಲ್ಲಿ ಮಕ್ಕಳ ವಿರುದ್ಧದ ಅಪರಾಧಗಳಿಗೆ ಸಂಬಂಧಿಸಿದ 2.26 ಲ.ಕ್ಕೂ ಅಧಿಕ ಪ್ರಕರಣಗಳು ಬಾಕಿಯಿದ್ದವು.
ಶನಿವಾರ ಲೋಕಸಭೆಯಲ್ಲಿ ರಾಜಸ್ಥಾನ ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ ಬೇನಿವಾಲ್ ಅವರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕಾನೂನು ಮತ್ತು ನ್ಯಾಯ ಸಚಿವ ಕಿರೆನ್ ರಿಜಿಜು ಅವರು,31 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 389 ವಿಶೇಷ ಪೊಕ್ಸೊ ನ್ಯಾಯಾಲಯಗಳು ಸೇರಿದಂತೆ 1,023 ತ್ವರಿತ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವ ಯೋಜನೆಯನ್ನು ಸರಕಾರವು ಆರಂಭಿಸಿತ್ತು. ಅತ್ಯಾಚಾರಕ್ಕೆ ಸಂಬಂಧಿಸಿದ ಮತ್ತು ಪೊಕ್ಸೊ ಕಾಯ್ದೆಯಡಿಯ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಉತ್ತರ ಪ್ರದೇಶವು 60,729 ಪ್ರಕರಣಗಳ ಬಾಕಿಯೊಂದಿಗೆ ಅಗ್ರಸ್ಥಾನದಲ್ಲಿದ್ದು,ಮಹಾರಾಷ್ಟ್ರ (30,677),ಪಶ್ಚಿಮ ಬಂಗಾಳ (19,649),ಬಿಹಾರ (14,089),ಒಡಿಶಾ (12,332) ಮತ್ತು ಮಧ್ಯಪ್ರದೇಶ (10,409) ನಂತರದ ಸ್ಥಾನಗಳಲ್ಲಿವೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದರು.
ಒಟ್ಟು 2,26,728 ಪ್ರಕರಣಗಳು ಬಾಕಿಯಿದ್ದು, ತೆಲಂಗಾಣ,ತಮಿಳುನಾಡು,ರಾಜಸ್ಥಾನ,ಗುಜರಾತ,ದಿಲ್ಲಿ, ಛತ್ತೀಸ್‌ಗಡ ಮತ್ತು ಅಸ್ಸಾಂ ಈ ಏಳು ರಾಜ್ಯಗಳಲ್ಲಿ 5,000ದಿಂದ 10,000 ಪ್ರಕರಣಗಳು ಬಾಕಿಯಿವೆ.
ತ್ವರಿತ ವಿಶೇಷ ನ್ಯಾಯಾಲಯಗಳ ಯೋಜನೆಯನ್ನು ಆರಂಭದಲ್ಲಿ ಒಂದು ವರ್ಷಕ್ಕಾಗಿ ರೂಪಿಸಲಾಗಿತ್ತಾದರೂ ಬಳಿಕ ಅದನ್ನು 2023,ಮಾ.31ರವರೆಗೆ ವಿಸ್ತರಿಸಲಾಗಿತ್ತು. ಯೋಜನೆಗೆ ಒಟ್ಟು 1,572.86 ಕೋ.ರೂ.ವೆಚ್ಚವಾಗಲಿದ್ದು,ಕೇಂದ್ರದ ಪಾಲು 971.70 ಕೋ.ರೂ.ಗಳಾಗಿವೆ ಮತ್ತು ಇದನ್ನು ನಿರ್ಭಯಾ ನಿಧಿಯಿಂದ ಭರಿಸಲಾಗುವುದು ಎಂದೂ ರಿಜಿಜು ತಿಳಿಸಿದರು.ಈ ವರೆಗೆ 28 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಯೋಜನೆಗೆ ಸೇರ್ಪಡೆಗೊಂಡಿದ್ದು,ಪ.ಬಂಗಾಳ,ಅರುಣಾಚಲ ಪ್ರದೇಶ ಹಾಗೂ ಅಂಡಮಾನ್ ಮತ್ತು ನಿಕೋಬಾರ ದ್ವೀಪಸಮೂಹ ಮಾತ್ರ ಯೋಜನೆಯಿಂದ ಹೊರಗುಳಿದಿವೆ.
ಉಚ್ಚ ನ್ಯಾಯಾಲಯಗಳಿಂದ ಲಭ್ಯ ಮಾಹಿತಿಯಂತೆ 2022,ಫೆಬ್ರವರಿಗೆ ಇದ್ದಂತೆ ವಿಶೇಷ ಪೊಕ್ಸೊ ನ್ಯಾಯಾಲಯಗಳು ಸೇರಿದಂತೆ ಒಟ್ಟು 712 ತ್ವರಿತ ನ್ಯಾಯಾಲಯಗಳು ಕಾರ್ಯ ನಿರ್ವಹಿಸುತ್ತಿದ್ದವು ಮತ್ತು 81,400ಕ್ಕೂ ಅಧಿಕ ಪ್ರಕರಣಗಳನ್ನು ಅವು ವಿಲೇವಾರಿಗೊಳಿಸಿವೆ ಎಂದೂ ರಿಜಿಜು ತಿಳಿಸಿದರು.







