ಖ್ಯಾತ ಡ್ರಮ್ ವಾದಕ ಟೇಲರ್ ಹಾಕಿನ್ಸ್ ನಿಧನ
ವಾಷಿಂಗ್ಟನ್, ಮಾ.26: ಅಮೆರಿಕದ ರಾಕ್‌ಸಂಗೀತ ತಂಡ ‘ಫೂ ಫೈಟರ್ಸ್’ನ ಖ್ಯಾತ ಡ್ರಮ್ ವಾದಕ ಟೇಲರ್ ಹಾಕಿನ್ಸ್ ಶನಿವಾರ ನಿಧನರಾಗಿರುವುದಾಗಿ ವರದಿಯಾಗಿದೆ.
25 ವರ್ಷದಿಂದ ನಮ್ಮೊಡನಿದ್ದ 50 ವರ್ಷದ ಖ್ಯಾತ ಡ್ರಮ್ ವಾದಕ ಹಾಕಿನ್ಸ್‌ರ ದುರಂತ ಮತ್ತು ಅಕಾಲಿಕ ಕಣ್ಮರೆಯಿಂದ ನಮ್ಮ ಕುಟುಂಬಕ್ಕೆ ಆಘಾತವಾಗಿದೆ. ಅವರ ಸಂಗೀತದ ಚೈತನ್ಯ ಮತ್ತು ಸದಾಕಾಲ ಹಸನ್ಮುಖದ ಮನೋಭಾವ ನಮ್ಮೊಂದಿಗೆ ಸದಾಕಾಲ ಇರಲಿದೆ ಎಂದು ‘ಫೂ ಫೈಟರ್ಸ್’ ಸಂತಾಪ ಸೂಚಕ ಸಂದೇಶದಲ್ಲಿ ಹೇಳಿದೆ. ಗ್ರಾಮಿ ಪುರಸ್ಕಾರ ವಿಜೇತ, ಎವರ್‌ಲಾಂಗ್, ಬೆಸ್ಟ್ ಆಫ್ ಯು ಮುಂತಾದ ಹಾಡುಗಳಿಂದ ಪ್ರಸಿದ್ಧಿ ಪಡೆದಿರುವ ಫೂ ಫೈಟರ್ಸ್ ರಾಕ್‌ಸಂಗೀತ ತಂಡವು ಶನಿವಾರ ರಾತ್ರಿ ಕೊಲಂಬಿಯಾದ ಬೊಗೊಟಾದಲ್ಲಿ ನಡೆಯುವ ವಾರ್ಷಿಕ ಹಬ್ಬದಲ್ಲಿ ಸಂಗೀತ ಕಾರ್ಯಕ್ರಮ ನೀಡಬೇಕಿತ್ತು. ಆದರೆ ಶನಿವಾರ ಬೆಳಿಗ್ಗೆ ಹಾಕಿನ್ಸ್ ಹಠಾತ್ ನಿಧನವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಆಯೋಜಕರು ವೇದಿಕೆಯಲ್ಲಿ ಮೋಂಬತ್ತಿ ಬೆಳಗಿಸಿ ಹಾಕಿನ್ಸ್‌ಗೆ ಶ್ರದ್ಧಾಂಜಲಿ ಸಲ್ಲಿಸಿದರು.
ಮಾರ್ಚ್ 20ರಂದು ಅರ್ಜೆಂಟೀನಾದ ಲೊಲ್ಲಪಲೂಝದಲ್ಲಿ ನಡೆದ ಸಂಗೀತ ಕಾರ್ಯಕ್ರಮ ಹಾಕಿನ್ಸ್ ಅವರು ಭಾಗವಹಿಸಿದ್ದ ಅಂತಿಮ ಕಾರ್ಯಕ್ರಮವಾಗಿತ್ತು ಮತ್ತು ಈ ಕಾರ್ಯಕ್ರಮದ ಮುಕ್ತಾಯಕ್ಕೆ ಪ್ರೇಕ್ಷಕರ ಕೋರಿಕೆ ಮೇರೆಗೆ ‘ಎವರ್‌ಲಾಂಗ್’ ಹಾಡನ್ನು ಹಾಡಲಾಗಿತ್ತು ಎಂದು ವರದಿಯಾಗಿದೆ.





