ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪನೆ: ಸಚಿವ ಮುರುಗೇಶ್ ನಿರಾಣಿ

ಹುಬ್ಬಳ್ಳಿ, ಮಾ. 26: ‘ಕಿತ್ತೂರು ಕರ್ನಾಟಕದ ಕೇಂದ್ರ ಬಿಂದು ಹುಬ್ಬಳ್ಳಿ-ಧಾರವಾಡ ಅವಳಿ ನಗರವು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಉತ್ಪನ್ನಗಳ(ಎಫ್‍ಎಂಸಿಜಿ) ಕ್ಲಸ್ಟರ್ ಸ್ಥಾಪನೆಗೆ ಹಣಕಾಸು ಇಲಾಖೆ ಅನುಮೋದನೆ ನೀಡಿದೆ' ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಪ್ರಕಟಿಸಿದ್ದಾರೆ.
ಶನಿವಾರ ನಗರದಲ್ಲಿ ಟೈ ಹುಬ್ಬಳ್ಳಿ ಆಯೋಜಿಸಿದ್ದ ಟೈಕಾನ್‍ನಲ್ಲಿ ಮಾತನಾಡಿದ ಅವರು, ‘ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಎಫ್‍ಎಂಸಿಜಿ ಕ್ಲಸ್ಟರ್ ಸ್ಥಾಪನೆಯಾಗುತ್ತಿರುವುದರಿಂದ ಇಲ್ಲಿ ಭಾರಿ ಮೊತ್ತದ ಬಂಡವಾಳ ಹೂಡಿಕೆಯಾಗಲಿದ್ದು, ಸಾವಿರಾರು ಉದ್ಯೋಗಗಳು ಸೃಷ್ಟಿಯಾಗಲಿವೆ. ಹೊಸದಾಗಿ ಸ್ಥಾಪನೆಯಾಗುತ್ತಿರುವ ಎಫ್‍ಎಂಸಿಜಿ ಕ್ಲಸ್ಟರ್ ಗೆ ವಿದ್ಯುತ್, ನೀರು, ರಸ್ತೆ ಸೇರಿದಂತೆ ಎಲ್ಲ ರೀತಿಯ ಮೂಲಭೂತ ಸೌಲಭ್ಯಗಳ ಜೊತೆಗೆ ರಾಜ್ಯ ಸರಕಾರ ಸಾಕಷ್ಟು ರಿಯಾಯಿತಿಯನ್ನು ನೀಡಿದೆ ಎಂದು ತಿಳಿಸಿದರು.
ಹುಬ್ಬಳ್ಳಿ-ಬೆಳಗಾವಿ ಮಾರ್ಗ ಮಧ್ಯೆ ಕಿತ್ತೂರು ಬಳಿ ಅಂತರ್‍ರಾಷ್ಟ್ರೀಯ ವಿಮಾನ ನಿಲ್ದಾಣ ಸ್ಥಾಪನೆ ಚರ್ಚೆಯ ಹಂತದಲ್ಲಿದೆ. ಖಾನಾಪುರ ರೈಲ್ವೆ ನಿಲ್ದಾಣದ ಬಳಿ ಕೈಗಾರಿಕೆಗಳ ಸ್ಥಾಪನೆಗೆ ಸಾವಿರ ಎಕರೆ ಭೂಸ್ವಾಧೀನ ಪ್ರಕ್ರಿಯೆ ಶೀಘ್ರದಲ್ಲೇ ಕೈಗೊಳ್ಳಲಾಗುವುದು. ಮುಖ್ಯಮಂತ್ರಿ ಇತ್ತೀಚೆಗೆ ಮಂಡಿಸಿದ ಕೈಗಾರಿಕೆಗಳ ಉತ್ತೇಜನಕ್ಕೆ ಸಾಕಷ್ಟು ವಿಶೇಷ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಕೈಗಾರಿಕಾ ಸ್ನೇಹಿ ವಾತಾವರಣ ನಿರ್ಮಾಣವಾಗುತ್ತಿದ್ದು, ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವನ್ನು ಮೊದಲ ಸ್ಥಾನಕ್ಕೆ ಕೊಂಡೊಯ್ಯಲು ನಾವು ಸರ್ವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.
ಸರಕಾರ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ದೊರಕಿಸುವುದು ಹಾಗೂ ಒಂದೇ ಬಾರಿಗೆ ಎಲ್ಲ ಯೋಜನೆಗಳಿಗೆ ಅನುಮೋದನೆ ನೀಡುವಉದ್ದೇಶದಿಂದ ಪ್ರಥಮ ಬಾರಿಗೆ ಬಜೆಟ್ ಘೋಷಣೆಗಳ ಅನುಷ್ಠಾನಕ್ಕೆ ಈ ಸಮಿತಿ ರಚಿಸಲಾಗಿದೆ. ಇದರಿಂದ ಕಾಲಮಿತಿಯೊಳಗೆ ಯೋಜನೆಗಳು ಅನುಷ್ಠಾನವಾಗಲಿವೆ. ಕೈಗಾರಿಕೋದ್ಯಮಕ್ಕೆ ಸರಕಾರ ಮಹತ್ವ ನೀಡಿದೆ. ನವೆಂಬರ್‍ನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಯುವ ಹಿನ್ನೆಲೆಯಲ್ಲಿ ಪೂರ್ವಭಾವಿ ಸಿದ್ಧತೆಗಳು ನಡೆಯುತ್ತಿವೆ. ದೊಡ್ಡ ಪ್ರಮಾಣದ ಬಂಡವಾಳ ಹೂಡಿಕೆಗೆ ಆಕರ್ಷಿಸುವ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದರು.
‘ಮೂರು ತ್ರೈ ಮಾಸಿಕಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಇದು ವಿದೇಶಿ ಹೂಡಿಕೆದಾರರಿಗೆ ನಮ್ಮ ರಾಜ್ಯದ ಮೇಲಿರುವ ವಿಶ್ವಾಸವನ್ನು ತೋರಿಸುತ್ತದೆ'
-ಮುರುಗೇಶ್ ಆರ್. ನಿರಾಣಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ







