ಶಿಗ್ಗಾಂವಿ, ಸವಣೂರಿನ 120 ಹಳ್ಳಿಗಳಿಗೆ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಾವೇರಿ, ಮಾ. 26: ಜಿಲ್ಲೆಯ ಶಿಗ್ಗಾಂವಿ ಹಾಗೂ ಸವಣೂರಿನ 120 ಹಳ್ಳಿಗಳಿಗೆ ಕುಡಿಯುವ ನೀರಿನ ಬೃಹತ್ ಯೋಜನೆಗೆ ಮಂಜೂರಾತಿ ನೀಡಲಾಗಿದ್ದು, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಾಗುವುದು' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಶನಿವಾರ ಇಲ್ಲಿನ ಶಿಗ್ಗಾಂವ್ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ಆಯೋಜಿಸಿದ್ದ ‘ಕಂದಾಯ ದಾಖಲೆಗಳು ಮನೆ ಮನೆಗೆ’ ತಲುಪಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ತಿಮ್ಮಾಪುರ ಗ್ರಾಮದಲ್ಲಿ ರಸ್ತೆ, ಶಾಲಾ ಕೊಠಡಿ, ಸಭಾಭವನ, ಕಾಂಕ್ರೀಟ್ ಕಾಲುವೆ ನಿರ್ಮಾಣ ಸೇರಿದಂತೆ ಅನೇಕ ಅಭಿವೃದ್ಧಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ರೇಶೆÉ್ಮ ಉತ್ಪಾದಕರಿಗೆ ರೇಶ್ಮೆ ಮಾರುಕಟ್ಟೆ, ಕೈಗಾರಿಕೆ ಟೌನ್‍ಶಿಪ್, ರಸ್ತೆಗಳ ನಿರ್ಮಾಣಕ್ಕೆ ಮಂಜೂರಾತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಬಹುಮುಖ ಆರ್ಥಿಕ ಅಭಿವೃದ್ಧಿಯ ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.
‘ದಾಖಲೆಗಳು ಮನೆ ಮನೆಗೆ’: ಕಂದಾಯ ಅಧಿಕಾರಿಗಳೇ ಜನರ ಮನೆ ಬಾಗಿಲಿಗೆ ಬಂದು ಜಮೀನಿನ ಪತ್ರ, ಮ್ಯಾಪ್, ಆದಾಯ ಹಾಗೂ ಜಾತಿ ಪ್ರಮಾಣ ಪತ್ರ ಸೇರಿದಂತೆ ಕಂದಾಯ ದಾಖಲೆಗಳನ್ನು ನೀಡುವ ಮೂಲಕ ಸರಕಾರವೇ ಮನೆ ಬಾಗಿಲಿಗೆ ಬರುವ ಕಾರ್ಯಕ್ರಮವಾಗಿದೆ. ಜನರ ಸಂಕಷ್ಟವನ್ನು ತಿಳಿದು ಪರಿಹಾರ ಸೂಚಿಸುವ ಜನಪರ ಸರಕಾರ ನಮ್ಮದು ಎಂದರು.
ರಾಜ್ಯದಲ್ಲಿ ಉಂಟಾದ ಬೆಳೆಹಾನಿಗೆ ಕೇಂದ್ರ ಸರಕಾರದ ಪರಿಹಾರಕ್ಕೆ ರಾಜ್ಯ ಸರಕಾರದ ಪರಿಹಾರವನ್ನೂ ಸೇರಿಸಿ ಒಣಬೇಸಾಯಕ್ಕೆ ಒಟ್ಟು 12,600 ರೂ., ನೀರಾವರಿ ಜಮೀನಿಗೆ 25ಸಾವಿರ ರೂ.ಹಾಗೂ ತೋಟಗಾರಿಕೆ ಬೆಳೆಗೆ 28ಸಾವಿರ ರೂ.ಪರಿಹಾರ ನೀಡಲಾಗುತ್ತಿದೆ. ಸಂಧ್ಯಾ ಸುರಕ್ಷಾ, ಅಂಗವಿಕಲರ ಮಾಸಾಶನ, ವಿಧವಾ ಮಾಸಾಶನಗಳನ್ನು ಗ್ರಾ.ಪಂ.ಮಟ್ಟದಲ್ಲಿ ಗ್ರಾಮ ಒನ್ ಕೇಂದ್ರಗಳ ಮೂಲಕ ನೀಡಲಾಗುತ್ತಿದೆ. ಸರಕಾರದ ಸವಲತ್ತುಗಳನ್ನು ಅವರ ಮನೆಗೆ ನೀಡುವ ಕೆಲಸವನ್ನು ಮಾಡುವ ಮೂಲಕ ಜನಪರ, ಜನರಿಗೋಸ್ಕರ ಹಾಗೂ ಜನರ ಹತ್ತಿರವಿರುವಂತಹ ಸರಕಾರ ಎಂದು ನಿರೂಪಿಸಲಾಗಿದೆ ಎಂದು ತಿಳಿಸಿದರು.
ವೈಶಿಷ್ಟ್ಯಪೂರ್ಣ ಬಜೆಟ್: ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅಪೌಷ್ಟಿಕತೆ ನಿವಾರಣೆ, ಕೈಗಾರಿಕೆ, ಉದ್ಯೋಗ, ಸ್ತ್ರೀಶಕ್ತಿ ಸಂಘಗಳ ಸಬಲೀಕರಣ, ನೀರಾವರಿ, ರಸ್ತೆ ರಾಜ್ಯದ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ವೈಶಿಷ್ಟ್ಯಪೂರ್ಣ ಬಜೆಟ್ ನೀಡಲಾಗಿದೆ. 33 ಲಕ್ಷ ರೈತರಿಗೆ ಸಾಲ ನೀಡುವ ಯೋಜನೆ, ಹಾಲು ಉತ್ಪಾದನೆ ಮಾಡುವ ರೈತರಿಗೆ ಆರ್ಥಿಕ ಸದೃಡತೆ ನೀಡಲು ಕ್ಷೀರ ಸಮೃದ್ಧಿ ಬ್ಯಾಂಕ್ ದೇಶದಲ್ಲಿಯೆ ಪ್ರಥಮ ಬಾರಿಗೆ ರಾಜ್ಯದಲ್ಲಿ ಸ್ಥಾಪಿಸಲಾಗುತ್ತಿದೆ. ಇದೇ ಎಪ್ರಿಲ್ 1ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬ್ಯಾಂಕಿನ ಲೋಗೋವನ್ನು ಉದ್ಘಾಟನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಆಡಳಿತದಲ್ಲಿ ಕ್ರಾಂತಿ ಜನಸ್ಪಂದನಾ: ತಿಮ್ಮಾಪುರ ಗ್ರಾಮದಲ್ಲಿ 512 ಪತ್ರಗಳನ್ನು 354 ಕುಟುಂಬಗಳಿಗೆ ಪಹಣಿ, ಅಟ್ಲಾಸ್ ನೀಡಲಾಗಿದೆ. 1,23,380 ಪ್ರತಿಗಳನ್ನು ವಿತರಣೆ ಮಾಡಲಾಗಿದೆ. ಗ್ರಾಮ ಒನ್ ಕೇಂದ್ರಗಳಲ್ಲಿ 75ಸಾವಿರ ಅರ್ಜಿಗಳು ಸ್ವೀಕೃತವಾಗಿದ್ದು, 56ಸಾವಿರ ಅರ್ಜಿಗಳಿಗೆ ಪರಿಹಾರ ನೀಡಲಾಗಿದೆ. ಬಡಜನರಿಗೆ 45 ಸಾವಿರ ಆಯುಷ್ಮಾನ್ ಕಾರ್ಡ್ ವಿತರಣೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಮೆಗಾ ಡೈರಿಯನ್ನು ಘೋಷಣೆ ಮಾಡಲಾಗಿದೆ. ಆಡಳಿತದಲ್ಲಿ ಕ್ರಾಂತಿ ತಂದಿರುವ ಜನಸ್ಪಂದನಾ ಸರಕಾರವಾಗಿದೆ ಎಂದು ಅವರು ತಿಳಿಸಿದರು.







