ಹಾಸನ ಜಿಲ್ಲೆಯ ಜನರನ್ನು ನಾನು ಎಂದೂ ಮರೆಯುವುದಿಲ್ಲ: ಹೆಚ್.ಡಿ. ದೇವೇಗೌಡ

ಹಾಸನ: 'ನನ್ನನ್ನು ಪ್ರಧಾನಿಯಾಗಿ ಆಶೀರ್ವದಿಸಿ ಕೊಟ್ಟ ಹಾಸನ ಜಿಲ್ಲೆಯ ಜನರನ್ನು ನಾನು ಮರೆಯುವಂತಿಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ತಿಳಿಸಿದರು.
ನಗರದ ಎಂ.ಜಿ. ರಸ್ತೆ, ಶ್ರೀ ರಾಮಕೃಷ್ಣ ನರ್ಸಿಂಗ್ ಹೋಮ್ ಎದುರು ಭಗವಾನ್ 1008 ಶ್ರೀ ಪಾರ್ಶ್ವನಾಥಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಕಲ್ಯಾಣ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
''ದೇಶದ ಕಲ್ಯಾಣಕ್ಕಾಗಿ ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು. ನಾನು ಮೊದಲಿನಾಗೆ ಓಡಾಡಲು ಆಗುವುದಿಲ್ಲ. ಹಿಂದೆ ನನ್ನನ್ನು ಆರಿಸಿ ಪಾರ್ಲಿಮೆಂಟ್ ಗೆ ಕಳುಹಿಸಿ ನಂತರ ಪ್ರಧಾನಿಯಾಗಿ ಕಳುಹಿಸಿದ್ದು, ನಾನು ನನ್ನ ಅವಧಿಯಲ್ಲಿ ಕಿಂಚಿತ್ತಾದರೂ ಗಮನಸೆಳೆಯುವ ಕೆಲಸ ಮಾಡಲು ಅವಕಾಶ ನೀಡಿದ್ದೀರಿ '' ಎಂದರು.
'5 ದಿನದ ಕಾರ್ಯಕ್ರಮದ ಮಧ್ಯೆ ಬರುವುದಾಗಿ ಹೇಳಿದಂತೆ ಇಂದು ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ನನಗೆ ಸಂತೋಷ ತಂದಿದೆ. ಭಗವಾನ್ 1008 ಶ್ರೀ ಪಾರ್ಶ್ವನಾಥಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಪೂರ್ವಕ ಪ್ರತಿಷ್ಠಾ ಕಲ್ಯಾಣ ಮಹೋತ್ಸವ ನಡೆಯುತ್ತಿದ್ದು, ಭಾಗವಹಿಸಿ ಆಶೀರ್ವಾದ ಪಡೆದಿದ್ದೇನೆ. ಸಮಾಜಕ್ಕೆ ತೀರ್ಥಂಕರರ ಕೊಡುಗೆ ಅಪಾರವಾಗಿದೆ. ಅವರ ಮಾರ್ಗದರ್ಶನದಲ್ಲಿ ನಾವುಗಳು ಶಾಂತಿಯಿಂದ ಮುಂದೆ ಸಾಗೋಣ' ಎಂದು ಹೇಳಿದರು.





