ಪುಟಿನ್ನಂಥ ಕ್ರೂರಿ ಅಧಿಕಾರದಲ್ಲಿರಬಾರದು: ಜೋ ಬೈಡನ್

ಜೋ ಬೈಡನ್-ವ್ಲಾದಿಮಿರ್ ಪುಟಿನ್
ವಾರ್ಸೊ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಉಕ್ರೇನ್ ವಿರುದ್ಧ ಕ್ರೂರ ದಾಳಿ ನಡೆಸಿದ ಅವರನ್ನು ವಜಾಗೊಳಿಸಬೇಕು ಎಂದು ಕರೆ ನೀಡಿದ್ದಾರೆ.
"ದೇವರ ಕಾರಣಕ್ಕೆ ಈ ವ್ಯಕ್ತಿ ಅಧಿಕಾರದಲ್ಲಿ ಮುಂದುವರಿಯಬಾರದು" ಎಂದು ಅವರು ನಾಲ್ಕು ದಿನಗಳ ಯೂರೋಪ್ ಪ್ರವಾಸದ ಅಂತ್ಯಕ್ಕೆ ಪೋಲಂಡ್ ರಾಜಧಾನಿಯಲ್ಲಿ ಮಾತನಾಡುವ ವೇಳೆ ಅಭಿಪ್ರಾಯಪಟ್ಟರು.
ಎರಡನೇ ತಿಂಗಳು ಮುಂದುವರಿದಿರುವ ಕ್ರೆಮ್ಲಿನ್ ದಾಳಿ ಪುಟಿನ್ ಅವರ ಪಾಲಿಗೆ ಪ್ರಮುಖ ವೈಫಲ್ಯ ಎಂದು ಹೇಳುತ್ತಾ ಬಂದಿರುವ ಬೈಡನ್, ರಷ್ಯಾ ಅಧ್ಯಕ್ಷರನ್ನು ಯುದ್ಧಾಪರಾಧಿ ಎಂದು ಜರೆದಿದ್ದರು. ಆದರೆ ಇದುವರೆಗೆ ಪುಟಿನ್ ರಷ್ಯಾವನ್ನು ಆಳ್ವಿಕೆ ಮಾಡಬಾರದು ಎಂದು ಹೇಳಿರಲಿಲ್ಲ. ಉಕ್ರೇನ್ ನಿರಾಶ್ರಿತರನ್ನು ಭೇಟಿ ಮಾಡಿದ ಅವರು, ಪುಟಿನ್ ಅವರನ್ನು "ಕಟುಕ" ಎಂದು ಟೀಕಿಸಿದ್ದಾರೆ.
ಪ್ರಜಾಪ್ರಭುತ್ವವನ್ನು ಮತ್ತು ನ್ಯಾಟೊ ಮಿಲಿಟರಿ ಮೈತ್ರಿಕೂಟ ರಕ್ಷಿಸಿಕೊಳ್ಳುವ ಅಗತ್ಯವನ್ನು ಪ್ರತಿಪಾದಿಸಿದ ಅವರು, ರಷ್ಯಾದ ಅತಿಕ್ರಮಣದ ವಿರುದ್ಧ ಸುಧೀರ್ಘ ಹೋರಾಟಕ್ಕೆ ಯೂರೋಪಿಯನ್ ಒಕ್ಕೂಟ ಉಕ್ಕಿನ ಶಕ್ತಿ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ರಷ್ಯನ್ ಸೇನೆ ಉಕ್ರೇನ್ನ ಎಲ್ಲ ನಗರಗಳಲ್ಲಿ ದಾಳಿ ಮುಂದುವರಿಸಿರುವ ನಡುವೆಯೇ ಅಮೆರಿಕ ಅಧ್ಯಕ್ಷರು ಉಕ್ರೇನ್ ನಿರಾಶ್ರಿತರನ್ನು ಭೇಟಿ ಮಾಡಿದರು.







