ಕೇರಳ: ಜನರ ಮೇಲೆ ಗುಂಡು ಹಾರಿಸಿದ ಪಾನಮತ್ತ ವ್ಯಕ್ತಿ, ಓರ್ವ ಮೃತ್ಯು

ಇಡುಕ್ಕಿ: ಮೂಲಮಟ್ಟಂನಲ್ಲಿ ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಯೋರ್ವ ದೇಶಿ ನಿರ್ಮಿತ ಬಂದೂಕಿನಿಂದ ಜನರ ಮೇಲೆ ಗುಂಡು ಹಾರಿಸಿದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮತ್ತೋರ್ವ ಗಾಯಗೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಡುಕ್ಕಿ ನಿವಾಸಿ ಸನಲ್ ಬಾಬು (33 ವರ್ಷ) ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡಿದ್ದಾನೆ. ಸನಿಲ್ ಬಾಬು ಸ್ನೇಹಿತ ಪ್ರದೀಪ್ ಗಾಯಗೊಂಡಿದ್ದು, ಆತನನ್ನು ಕೋಳಂಚೇರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಗುಂಪಿನ ಮೇಲೆ ಗುಂಡು ಹಾರಿಸಿದ ಫಿಲಿಪ್ ಮಾರ್ಟಿನ್ (33) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಶನಿವಾರ ತಡರಾತ್ರಿ ಈ ಘಟನೆ ನಡೆದಿದ್ದು, ಮಾರ್ಟಿನ್ ಹಾಗೂ ಆತನ ಸ್ನೇಹಿತ ದಾರಿಬದಿಯ ಉಪಾಹಾರ ಗೃಹಕ್ಕೆ ಬಂದು ಆಹಾರ ಕೇಳಿದ್ದಾರೆ.
"ಊಟವಿಲ್ಲ ಎಂಬ ಕಾರಣಕ್ಕೆ ಇಬ್ಬರೂ ಉಪಾಹಾರ ಗೃಹದ ಮಾಲಿಕರನ್ನು ನಿಂದಿಸಲಾರಂಭಿಸಿದರು. ಉಪಾಹಾರ ಗೃಹದಲ್ಲಿದ್ದವರು ಅದನ್ನು ವಿರೋಧಿಸಿದರು. ಕೋಪಗೊಂಡ ಮಾರ್ಟಿನ್, ಹತ್ತಿರದ ತನ್ನ ಮನೆಗೆ ಹೋಗಿ ಬಂದೂಕು ತಂದು ಗಾಳಿಯಲ್ಲಿ ಗುಂಡು ಹಾರಿಸಿದ್ದಾನೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸಿದ ನಂತರ, ಮಾರ್ಟಿನ್ ಹೊರಡಲು ಕಾರನ್ನು ಹತ್ತಿದ್ದ. ಆದರೆ ಜನಸಂದಣಿಯನ್ನು ನೋಡಿ ವಾಹನದಿಂದ ಹೊರಬಂದ ಹಾಗೂ ಮತ್ತೆ ಗುಂಡು ಹಾರಿಸಿದ. ಈ ಸಮಯದಲ್ಲಿ ಆ ಪ್ರದೇಶದ ಮೂಲಕ ಪ್ರಯಾಣಿಸುತ್ತಿದ್ದ ಇಬ್ಬರಿಗೆ ಗುಂಡು ತಗಲಿದೆ. ಒಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ, ಇನ್ನೊಬ್ಬ ಗಾಯಗೊಂಡಿದ್ದಾರೆ" ಎಂದು ಅಧಿಕಾರಿ ಹೇಳಿದರು.







