ಸಿಎಂ ಮಾನಹಾನಿ: 100 ಕೋ.ರೂ.ಪರಿಹಾರ ಕೋರಿ ತ.ನಾ .ಬಿಜೆಪಿ ಅಧ್ಯಕ್ಷ ಅಣ್ಣಾಮಲೈಗೆ ಡಿಎಂಕೆ ನೋಟಿಸ್

ಅಣ್ಣಾಮಲೈ (PTI)
ಚೆನ್ನೈ, ಮಾ.27: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಅವರ ದುಬೈ ಎಕ್ಸ್ಪೋಗೆ ಭೇಟಿ ಕುರಿತು ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಕ್ಕಾಗಿ ಡಿಎಂಕೆ ಸಂಸದ ಆರ್.ಎಸ್.ಭಾರತಿ ಅವರು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಅವರಿಗೆ 100 ಕೋ.ರೂ.ಗಳ ಮಾನಹಾನಿ ನೋಟಿಸನ್ನು ಕಳುಹಿಸಿದ್ದಾರೆ. ಅಣ್ಣಾಮಲೈ ಅವರು ಸಾರ್ವಜನಿಕವಾಗಿ ಸಂಪೂರ್ಣ ಸುಳ್ಳು, ನೀಚ ಮತ್ತು ಹಗರಣದ ಹೇಳಿಕೆಗಳನ್ನು ನೀಡುವ ಮೂಲಕ ಪದೇ ಪದೇ ಮುಖ್ಯಮಂತ್ರಿಗಳ ಪ್ರತಿಷ್ಠೆಗೆ ಕಲಂಕವನ್ನು ತರುವ, ಮಾನಹಾನಿಯ ಪ್ರಯತ್ನಗಳನ್ನು ಮಾಡಿದ್ದಾರೆ ಎಂದು ಭಾರತಿ ಶನಿವಾರ ರವಾನಿಸಿರುವ ಮಾನಹಾನಿ ನೋಟಿಸಿನಲ್ಲಿ ಹೇಳಿದ್ದಾರೆ ಎಂದು thenewsminute.com ವರದಿ ಮಾಡಿದೆ.
ಮಾ.24 ಮತ್ತು 25ರಂದು ವಿರುಧುನಗರ ಮತ್ತು ಚೆನ್ನೈಗಳಲ್ಲಿ ನಡೆದಿದ್ದ ಎರಡು ಪ್ರತಿಭಟನೆಗಳ ಸಂದರ್ಭ ಅಣ್ಣಾಮಲೈ ಅವರು ಮುಖ್ಯಮಂತ್ರಿಗಳ ವಿರುದ್ಧ ಹಲವಾರು ನೀಚ, ದುರುದ್ದೇಶಪೂರಿತ ಮತ್ತು ಸುಳ್ಳು ಆರೋಪಗಳನ್ನು ಮಾಡಿದ್ದಾರೆ ಎಂದು ಭಾರತಿ ನೋಟಿಸಿನಲ್ಲಿ ತಿಳಿಸಿದ್ದಾರೆ. ಕ್ರಿಮಿನಲ್ ಚಟುವಟಿಕೆಗಳಲ್ಲಿ ತೊಡಗಿರುವವರಿಗೆ ಅಪರಾಧದ ಸಮಯದಲ್ಲಿ ತಾನು ಸ್ಥಳದಲ್ಲಿರಲಿಲ್ಲ ಎಂದು ಸಾಧಿಸಲು ಪುರಾವೆಯ ಅಗತ್ಯವಿರುತ್ತದೆ ಮತ್ತು ಸ್ಟಾಲಿನ್ ಇಂತಹ ಪುರಾವೆಗಾಗಿ ಮಾತ್ರ,ಯಾವುದೋ ಅಪರಾಧವನ್ನು ಎಸಗಲು ಮಾತ್ರ ದುಬೈಗೆ ಪ್ರಯಾಣಿಸಿದ್ದಾರೆ ಎಂದು ಅಣ್ಣಾಮಲೈ ಹೇಳಿದ್ದಾಗಿ ಭಾರತಿ ಆರೋಪಿಸಿದ್ದಾರೆ.
ಅಣ್ಣಾಮಲೈ ಸಾರ್ವಜನಿಕವಾಗಿ ನೀಡಿರುವ ಹೇಳಿಕೆಗಳಿಂದಾಗಿ ಮುಖ್ಯಮಂತ್ರಿಗಳ ಸಾಮಾಜಿಕ, ರಾಜಕೀಯ ಮತ್ತು ವೈಯಕ್ತಿಕ ಪ್ರತಿಷ್ಠೆಗೆ ತೀವ್ರ ಹಾನಿಯಾಗಿದೆ ಎಂದು ಹೇಳಿರುವ ಭಾರತಿ, ಅಣ್ಣಾಮಲೈ 24 ಗಂಟೆಗಳಲ್ಲಿ ಸಾರ್ವಜನಿಕವಾಗಿ ಮುಖ್ಯಮಂತ್ರಿಗಳಿಂದ ಬೇಷರತ್ ಕ್ಷಮೆ ಯಾಚಿಸಬೇಕು, ಸ್ಟಾಲಿನ್ ವಿರುದ್ಧ ಅವಮಾನಕಾರಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು ಮತ್ತು ಪರಿಹಾರವಾಗಿ ನೋಟಿಸ್ ಸ್ವೀಕರಿಸಿದ ಎರಡು ದಿನಗಳಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 100 ಕೋ.ರೂ.ಗಳನ್ನು ಪಾವತಿಸಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲದಿದ್ದರೆ ಅವರ ವಿರುದ್ಧ ಕಾನೂನು ಕ್ರಮವನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
‘ಡಿಎಂಕೆ ನನ್ನ ವಿರುದ್ಧ 100 ಕೋ.ರೂ.ಗಳ ಮಾನಹಾನಿ ನೋಟಿಸ್ ಹೊರಡಿಸಿದೆಯೆಂದು ನನಗೆ ಮಾಹಿತಿ ನೀಡಲಾಗಿದೆ. ಡಿಎಂಕೆಯ ಪ್ರಥಮ ಕುಟುಂಬವು ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ‘ತನ್ನಂತಹ ದುಬೈ ಕುಟುಂಬಕ್ಕೆ’ ಸಮಾನವಾಗಿ ಪರಿಗಣಿಸಿದೆ. ನನಗೆ ನ್ಯಾಯಾಂಗದಲ್ಲಿ ಸಂಪೂರ್ಣ ವಿಶ್ವಾಸವಿದೆ. ಎಲ್ಲ ಬೆದರಿಕೆಗಳನ್ನು ನ್ಯಾಯಾಲಯದಲ್ಲಿ ಎದುರಿಸುತ್ತೇನೆ. ನನ್ನ ಹೋರಾಟ ತಮಿಳುನಾಡಿಗಾಗಿ’ ಎಂದು ಅಣ್ಣಾಮಲೈ ಪ್ರತಿಕ್ರಿಯಿಸಿದ್ದಾರೆ.







