ಶೋಷಿತರ ನೆಮ್ಮದಿ ಬದುಕಿಗೆ ಕಾರಣವಾಗಿರುವವರು ಡಾ.ಅಂಬೇಡ್ಕರ್: ದಸಂಸ ರಾಜ್ಯ ಸಂಚಾಲಕ ಪಾಂಡುರಂಗಸ್ವಾಮಿ

ಚಿಕ್ಕಮಗಳೂರು: ದಲಿತ ಸಮುದಾಯದ ಜನ ತಮ್ಮ ಏಳಿಗೆಗಾಗಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಕಿಕೊಟ್ಟಿರುವ ಹಾದಿಯಲ್ಲಿ ಸಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಆರ್.ಪಾಂಡುರಂಗಸ್ವಾಮಿ ಹೇಳಿದರು.
ರವಿವಾರ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶ ಹಾಗೂ ನೂತನ ಜಿಲ್ಲಾಸಮಿತಿ ರಚನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದಲಿತರು, ಅಲ್ಪಸಂಖ್ಯಾತರು, ಮಹಿಳೆಯರು ಇಂದು ಸಮಾಜದಲ್ಲಿ ಗೌರವದಿಂದ ತುಸು ನೆಮ್ಮದಿಯಿಂದ ಬದುಕುತ್ತಿರುವುದಕ್ಕೆ ಮೂಲ ಕಾರಣ ಸಂವಿಧಾನ ಶಿಲ್ಪಿ ಡಾ.ಬಿಆರ್.ಅಂಬೇಡ್ಕರ್ ಅವರ ಹೋರಾಟ, ಅವರ ಹೋರಾಟದಿಂದಾಗಿ ದಲಿತರಿಂದು ಮತದಾನದ ಹಕ್ಕು ಸೇರಿದಂತೆ ಹತ್ತು ಹಲವು ಹಕ್ಕುಗಳನ್ನು ಪಡೆದುಕೊಳ್ಳುವಂತಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ದೇಶದಲ್ಲಿ ಅಸ್ಪೃಶ್ಯತೆ, ಜಾತೀಯತೆ ತಾಂಡವವಾಡುತ್ತಿತ್ತು. ದಲಿತರನ್ನು ಮೇಲ್ವರ್ಗದ ಜನ ಮನುಷ್ಯರೆಂದು ತಿಳಿದಿರಲಿಲ್ಲ. ಅವರನ್ನು ಪಶುಗಳಂತೆ ಹೀನಾಯವಾಗಿ ಕಾಣುತ್ತಿದ್ದರು. ಮನೆಯೊಳಗೆ ದೇವಸ್ಥಾನದೊಳಗೆ, ಹೋಟೆಲ್ ಒಳಗೆ ಸೇರಿಸುತ್ತಿರಲಿಲ್ಲ, ಅಂಬೇಡ್ಕರ್ ಅವರ ಹೋರಾಟದಿಂದಾಗಿ ಆ ಆಚರಣೆಗಳು ನಿಂತವು ಎಂದು ತಿಳಿಸಿದರು.
ದಲಿತ ಸಮುದಾಯದ ಜನ ಇವುಗಳನ್ನು ಅರ್ಥಮಾಡಿಕೊಳ್ಳಬೇಕು. ತಮ್ಮ ನಾಯಕ ಅಂಬೇಡ್ಕರ್ ಅವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರೂ ತಪ್ಪದೇ ಓದಬೇಕು. ಅವರ ಹೋರಾಟ, ತತ್ವ, ಸಂದೇಶಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಂಬೇಡ್ಕರ್ ಅವರು ಹೋರಾಟ ನಡೆಸಿದ ಅಸ್ಪೃಶ್ಯತೆ ದೌರ್ಜನ್ಯ ಶೋಷಣೆ ಸಮಾಜದಲ್ಲಿ ಇನ್ನೂ ಪೂರ್ತಿಯಾಗಿ ಕೊನೆಗೊಂಡಿಲ್ಲ ಅಲ್ಲಲ್ಲಿ ಇನ್ನೂ ಕಂಡುಬರುತ್ತಿದೆ ಎಂದ ಅವರು, ದಲಿತ ಸಮುದಾಯ ಈಗಲೇ ಎಚ್ಚೆತ್ತುಕೊಂಡು ಅದರ ವಿರುದ್ಧ ಹೋರಾಟ ನಡೆಸಬೇಕು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಂಘಟನಾ ಸಂಚಾಲಕ ಕೋಡಿಗಲ್ ರಮೇಶ್ ಮಾತನಾಡಿದರು. ಜಿಲ್ಲಾ ಸಮಿತಿ ಜಿಲ್ಲಾ ಸಂಚಾಲಕ ಟಿ.ಕೀರ್ತಿ, ಸಂಘಟನಾ ಸಂಚಾಲಕ ಮಂಜಾನಾಯ್ಕ, ಮೋ ಹನ್‍ಕುಮಾರ್, ಪ್ರವೀಣ, ರಾಜೇಶ್, ಮುತ್ತುರಾಜ್, ನವೀನ, ಮೈಲಾರಪ್ಪ, ಖಜಾಂಚಿ ಸಾಗರ್ ನೇಮಕಗೊಳಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಸಂಚಾಲಕರಾದ ಎಂ.ಶಿವಾನಂದ, ಎ.ಎಲ್.ಭಾಸ್ಕರ್, ಟಿ.ಎಂ.ಅಜ್ಯಯ್ಯ, ಡಾ.ಎಂ.ಸೋಮಶೇಖರ್, ಎಚ್.ಮುನಿಯಪ್ಪ, ಜಿ.ಬಸವರಾಜ್, ಕಡೂ ರು ಕೃಷ್ಣಪ್ಪ, ಆರ್.ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







