ಆಸ್ಕರ್ರ ಕೆಲಸಗಳನ್ನು ಗುರುತಿಸುವಲ್ಲಿ ಮಾಧ್ಯಮಗಳು ಸೋತಿದ್ದವು: ಕುದಿ ವಸಂತ ಶೆಟ್ಟಿ

ಉಡುಪಿ : ಆಸ್ಕರ್ ಫೆರ್ನಾಂಡಿಸ್ ಅವರ ಸಾಧನೆಗಳು ಅನಾವರಣ ಗೊಂಡದ್ದು ಅವರು ನಿಧನರಾದ ಬಳಿಕವೇ. ಅವರು ಬದುಕಿದ್ದಾಗ ಮಾಧ್ಯಮ ಗಳು ಕೂಡಾ ಅವರ ಕೆಲಸಗಳನ್ನು ಗುರುತಿಸುವಲ್ಲಿ ಸೋತವು. ಅದು ಆಸ್ಕರ್ ಅವರಿಗೂ ಬೇಡವಾಗಿತ್ತು. ಎಂದೂ ಕೂಡಾ ಅವರು ಪ್ರಚಾರದ ಹಿಂದೆ ಹೋದ ವರಲ್ಲ. ಆದರೆ ಇಂದಿನ ರಾಜಕೀಯದಲ್ಲಿ ಪ್ರಚಾರವೇ ಪ್ರಧಾನ ಪಾತ್ರ ವಹಿಸುತ್ತಿದೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ ಮುಖ್ಯೋಪಾಧ್ಯಾಯ ಕುದಿ ವಸಂತ ಶೆಟ್ಟಿ ಹೇಳಿದ್ದಾರೆ.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ರವಿವಾರ ಜರಗಿದ ದಿ.ಓಸ್ಕರ್ ಫೆರ್ನಾಂಡಿಸ್ ಅವರ 82 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಆಸ್ಕರ್ ಫೆರ್ನಾಂಡಿಸ್ ಎಲ್ಲಾ ಧರ್ಮವನ್ನು ಕೂಡ ಆಳವಾಗಿ ಅಭ್ಯಾಸಿಸಿ ದ್ದರು. ನಗರಸಭೆಯಿಂದ ತಮ್ಮ ಸಕ್ರಿಯ ರಾಜಕಾರಣವನ್ನು ಪ್ರಾರಂಭಿಸಿದ ಅವರು ರಾಷ್ಟ್ರ ರಾಜಕಾರಣಕ್ಕೆ ಏರಿದ್ದರೂ ಕೂಡ ಅವರು ತಾವು ಬಂದ ದಾರಿ ಯನ್ನೂ ಎಂದೂ ಮರೆತಿರಲಿಲ್ಲ. ಅವರ ರಾಜಕೀಯ ಬೆಳವಣಿಗೆಗೆ ತಳಮಟ್ಟ ದಲ್ಲಿ ಅವರ ಸಂಘಟನೆಯ ಕೆಲಸಗಳು ಮುಖ್ಯ ಕಾರಣವಾಯಿತು ಅವರ ರಾಜಕೀಯ ಬದುಕಿನ ಶಬ್ದ ಕೋಶದಲ್ಲಿ ದ್ವೇಷ, ಸಿಟ್ಟು, ಸೆಡವು, ಅಸಹನೆ ಎಂಬ ಪದಗಳೇ ಇರಲಿಲ್ಲ. ಸರಳವಾಗಿ ಬದುಕಿದ ಆಸ್ಕರ್, ಜನ ಸಾಮಾನ್ಯರ ಹೃದಯಾಂತರಾಳದಲ್ಲಿ ಸದಾ ಅಜರಾಮರರು ಎಂದರು.
ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಓಸ್ಕರ್ ಫೆರ್ನಾಂಡಿಸ್ ರಾಜಕೀಯದಲ್ಲಿ ಒಂದು ದೊಡ್ಡ ನಿರ್ವಾತವನ್ನೇ ಬಿಟ್ಟು ಹೋಗಿದ್ದಾರೆ. ಸದ್ಯಕ್ಕಂತೂ ಅ ನಿರ್ವಾತ ತುಂಬಲು ನಮ್ಮಿಂದ ಆಗುತ್ತಿಲ್ಲ. ತಳ ಮಟ್ಟದಲ್ಲಿ ಪಕ್ಷ ಸಂಘಟನೆಗೆ ಒತ್ತು ಕೊಟ್ಟ ಓಸ್ಕರಣ್ಣ ಅದರಲ್ಲಿ ಯಶಸ್ವಿಯಾದರು. ಸರಳ ಸಜ್ಜನಿಕೆಯ, ಅಜಾತ ಶತ್ರು ಆದ ಇವರು ರಾಜಕೀಯ ವ್ಯಕ್ತಿಗಳಿಗೊಂದು ಮಾದರಿ ಮತ್ತು ಇವರ ರಾಜಕೀಯ ಬದುಕು ಮುಂದಿನ ಪೀಳಿಗೆಗೆ ಅಭ್ಯಾಸ ಮಾಡಲು ಒಂದು ಪಠ್ಯ ಎಂದರು.
ಮಾಜಿ ಶಾಸಕ ಯು.ಆರ್.ಸಭಾಪತಿ, ಧರ್ಮಗುರು ರೆ.ಫಾ.ವಿಲಿಯಂ ಮಾರ್ಟಿಸ್, ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಎಂ.ಎ.ಗಫೂರ್ ಮಾತನಾಡಿದರು. ವಿಧಾನ ಪರಿಷತ್ ಮಾಜಿ ಸಭಾಪತಿ ಕೆ.ಪ್ರತಾಪ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು
ಮುಖಂಡರಾದ ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಳೆಬೈಲ್, ಕುಶಾಲ್ ಶೆಟ್ಟಿ ಇಂದ್ರಾಳಿ, ಬಿ.ನರಸಿಂಹಮೂರ್ತಿ, ರಮೇಶ್ ಕಾಂಚನ್, ದಿನಕರ ಹೇರೂರು, ಸಂತೋಷ್ ಕುಲಾಲ್, ಹರಿಪ್ರಸಾದ್ ಶೆಟ್ಟಿ, ಶಂಕರ ಕುಂದರ್, ಮಂಜುನಾಥ ಪೂಜಾರಿ, ಮುರಳಿ ಶೆಟ್ಟಿ, ದಿವಾಕರ ಕುಂದರ್, ದಿಲೀಪ್ ಹೆಗ್ಡೆ, ಶಬರೀಶ್ ಸುವರ್ಣ, ಮಹಮ್ಮದ್ ಅಶ್ಪಾಕ್, ಸದಾಶಿವ ಕಟ್ಟೆಗುಡ್ಡೆ, ಮೇರಿ ಶ್ರೇಷ್ಟ, ಪ್ರಮೀಳಾ ಸಿ.ಆರ್.ಬಲ್ಲಾಳ್, ಕೇಶವ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಅಲೆವೂರು ಹರೀಶ್ ಕಿಣಿ ವಂದಿಸಿದರು. ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರ್ವಹಸಿದರು.