ಕರಾವಳಿ ಜಿಲ್ಲೆಗಳಲ್ಲಿ ರಂಗಮಂದಿರಗಳೇ ಇಲ್ಲ: ಪ್ರೊ.ಮುರಳೀಧರ್ ಉಪಾಧ್ಯ ಅಸಮಾಧಾನ

ಉಡುಪಿ : ಕರಾವಳಿ ಜಿಲ್ಲೆಗಳಲ್ಲಿ ರಂಗಭೂಮಿ ಬಗ್ಗೆ ಪ್ರಭುತ್ವ ಹಾಗೂ ಸರಕಾರ ದಿವ್ಯ ನಿರ್ಲಕ್ಷ್ಯ ವಹಿಸಿದ್ದು, ಇವತ್ತಿಗೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲಾ ರಂಗಮಂದಿರಗಳೇ ನಿರ್ಮಾಣವಾಗಿಲ್ಲ ಎಂದು ಉಡುಪಿ ರಥಬೀದಿ ಗೆಳೆಯರು ಸಂಘಟನೆ ಹಾಗೂ ವಿಮರ್ಶಕ ಅಧ್ಯಕ್ಷ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ನಾಟಕ ಅಕಾಡೆಮಿ ಮತ್ತು ಉಡುಪಿ ರಂಗಭೂಮಿ ಸಹಯೋಗ ದಲ್ಲಿ ಉಡುಪಿ ಎಂಜಿಎಂ ಕಾಲೇಜು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದೊಂದಿಗೆ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರವಿವಾರ ಆಯೋಜಿಸಲಾದ ‘ವಿಶ್ವ ರಂಗಭೂಮಿ ದಿನಾಚರಣೆ-೨೦೨೨’ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಮಂಗಳೂರಿನಲ್ಲಿ ಕಳೆದ ಎರಡು ದಶಕಗಳಲ್ಲಿ ರಂಗ ಮಂದಿರ ನಿರ್ಮಾಣಕ್ಕೆ ಐದು ಬಾರಿ ಶಂಕುಸ್ಥಾಪನೆಯಾಗಿದೆ. ಇತ್ತೀಚೆಗೆ ಐದು ವರ್ಷಗಳ ಹಿಂದೆ ಶಂಕು ಸ್ಥಾಪನೆಯಾದರೂ ಇನ್ನೂ ಕೆಲಸ ಆರಂಭವಾಗಿಲ್ಲ. ಉಡುಪಿಯ ಆದಿಉಡುಪಿ ಯಲ್ಲಿ ಎರಡು ವರ್ಷಗಳ ಹಿಂದೆ ಜಿಲ್ಲಾ ರಂಗಮಂದಿರಕ್ಕೆ ಶಂಕುಸ್ಥಾಪನೆ ಮಾಡ ಲಾಗಿದೆ. ಆದರೆ ಜಾಗ ಅದಕ್ಕೆ ಸೂಕ್ತವಲ್ಲ. ಉತ್ತರ ಕನ್ನಡದ ಜಿಲ್ಲಾ ರಂಗಮಂದಿರ ಇಂದು ದುಸ್ಥಿತಿಯಲ್ಲಿದೆ. ಉಡುಪಿಯಲ್ಲಿ ಸುಸಜ್ಜಿತವಾದ ಪುರಭವನ ನಿರ್ಮಾಣ ವಾದರೂ ಅದು ನಗರಸಭೆ ಕೈಯಲ್ಲಿ ಇಲ್ಲ. ಅದನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲಾಗಿದೆ ಎಂದರು.
ಅಧ್ಯಕ್ಷತೆಯನ್ನು ಅಂಬಲಪಾಡಿ ಜರ್ನಾದನ ಮತ್ತು ಮಹಾಕಾಳಿ ದೇವಸ್ಥಾನದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳ್ ವಹಿಸಿದ್ದರು. ಮುಖ್ಯ ಅತಿಥಿ ಯಾಗಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ದೇವಿದಾಸ್ ನಾಯ್ಕ್ ಮಾತ ನಾಡಿದರು. ಇದೇ ಸಂದರ್ಭದಲ್ಲಿ ರಂಗಭೂಮಿ ಉಪಾಧ್ಯಕ್ಷ ಎಂ. ನಂದ ಕುಮಾರ್ ಅವರಿಗೆ ವಿಶ್ವರಂಗಭೂಮಿ ದಿನಾಚರಣೆ ಗೌರವ ನೀಡಿ ಸನ್ಮಾನಿಸ ಲಾಯಿತು.
ರಂಗಭೂಮಿ ಉಪಾಧ್ಯಕ್ಷ ಭಾಸ್ಕರ್ ರಾವ್ ಕಿದಿಯೂರು ಉಪಸ್ಥಿತರಿದ್ದರು. ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ಕಲಾವಿದರಿಂದ ’ಉಡಿಯೊಳಗಣ ಕಿಚ್ಚು’ ನಾಟಕ ಪ್ರದರ್ಶನಗೊಂಡಿತು.







