ಮನ್ ಕಿ ಬಾತ್: 400 ಬಿಲಿಯನ್ ಡಾಲರ್ ರಫ್ತು ಸಾಧನೆಗಾಗಿ ಭಾರತಕ್ಕೆ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ

ಹೊಸದಿಲ್ಲಿ,ಮಾ.27: 400 ಬಿಲಿಯನ್ ಡಾಲರ್ ಮೌಲ್ಯದ ರಫ್ತು ಗುರಿಯನ್ನು ಸಾಧಿಸಿದ್ದಕ್ಕಾಗಿ ಭಾರತವನ್ನು ಅಭಿನಂದಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ತನ್ನ ಈ ತಿಂಗಳ ‘ಮನ್ ಕಿ ಬಾತ್’ ಕಾರ್ಯಕ್ರಮವನ್ನು ಆರಂಭಿಸಿದರು. ಈ ಸಾಧನೆಯು ಭಾರತದ ಶಕ್ತಿಸಾಮರ್ಥ್ಯಗಳನ್ನು ಮತ್ತು ವಿಶ್ವಾದ್ಯಂತ ಭಾರತೀಯ ಸರಕುಗಳಿಗೆ ಬೇಡಿಕೆಯು ಹೆಚ್ಚುತ್ತಿದೆ ಎನ್ನುವುದನ್ನು ಸೂಚಿಸುತ್ತಿದೆ ಎಂದರು.
ಸರಕಾರಿ ಇ-ಮಾರ್ಕೆಟ್‌ಪ್ಲೇಸ್(ಜಿಇಎಂ) ಪೋರ್ಟಲ್ ಮೂಲಕ ಸರಕಾರವು ಸರಕುಗಳನ್ನು ಖರೀದಿಸಿದೆ ಎನ್ನುವುದನ್ನು ಪ್ರಮುಖವಾಗಿ ಬಿಂಬಿಸಿದ ಅವರು, ಸುಮಾರು ಒಂದೂವರೆ ಲಕ್ಷ ಸಣ್ಣ ಉದ್ಯಮಿಗಳು ತಮ್ಮ ಉತ್ಪನ್ನಗಳನ್ನು ಸರಕಾರಕ್ಕೆ ನೇರವಾಗಿ ಮಾರಾಟ ಮಾಡುತ್ತಿದ್ದಾರೆ ಎಂದರು.
ಈ ಹಿಂದೆ ಕೇವಲ ದೊಡ್ಡ ವ್ಯಕ್ತಿಗಳು ಸರಕಾರಕ್ಕೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಬಹುದು ಎಂಬ ನಂಬಿಕೆಯಿತ್ತು, ಆದರೆ ಜಿಇಎಂ ಇದನ್ನು ಬದಲಿಸಿದೆ. ಇದು ನವಭಾರತದ ಚೈತನ್ಯವನ್ನು ತೋರಿಸುತ್ತಿದೆ ಎಂದರು.ಬಿಜೆಪಿಯು ಉ.ಪ್ರದೇಶ, ಉತ್ತರಾಖಂಡ, ಗೋವಾ ಮತ್ತು ಮಣಿಪುರಗಳಲ್ಲಿ ವಿಧಾನಸಭಾ ಚುನಾವಣೆಗಳನ್ನು ಗೆದ್ದ ಬಳಿಕ ಇದು ಪ್ರಧಾನಿಯವರ ಮೊದಲ ರೇಡಿಯೊ ಕಾರ್ಯಕ್ರಮವಾಗಿದೆ.ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಇತರ ಬಿಜೆಪಿ ಕಾರ್ಯಕರ್ತರೊಂದಿಗೆ ದಿಲ್ಲಿಯ ಯಮುನಾ ವಿಹಾರ ಮಂಡಲ್ ನ ಬೂತ್ ಸಂಖ್ಯೆ 59ರಲ್ಲಿ ಉಪಸ್ಥಿತರಿದ್ದು ಮನ್ ಕಿ ಬಾತ್ ಕಾರ್ಯಕ್ರಮವನ್ನು ಆಲಿಸಿದರು.







