ಒಂದು-ಮಗು ನೀತಿಯ ದುಷ್ಪರಿಣಾಮ; ಪಿಂಚಣಿ ವೆಚ್ಚದಲ್ಲಿ ಏರಿಕೆ: ನಿವೃತ್ತಿ ವಯಸ್ಸನ್ನು ಹೆಚ್ಚಿಸಿದ ಚೀನಾ

photo pti
ಬೀಜಿಂಗ್, ಮಾ. 27: ಚೀನಾ ಕಮ್ಯುನಿಸ್ಟ್ ಪಕ್ಷ (ಸಿಸಿಪಿ)ವು ಸರಕಾರಿ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಏರಿಸಿದೆ. ಕುಟುಂಬಕ್ಕೆ ಒಂದೇ ಮಗು ಎಂಬ ಚೀನಾದ ಕಠಿಣ ನೀತಿಯ ದೂರಗಾಮಿ ಪರಿಣಾಮ ಇದಾಗಿದೆ. ಒಂದು ಕಡೆ ಚೀನಾದ ಜನಸಂಖ್ಯೆಯಲ್ಲಿ ವೃದ್ಧರ ಪ್ರಮಾಣ ಹೆಚ್ಚುತ್ತಿದೆ. ಅದಕ್ಕೆ ಪೂರಕವಾಗಿ, ಇನ್ನೊಂದು ಕಡೆ ಪಿಂಚಣಿಗಾಗಿ ಸರಕಾರ ಮಾಡುತ್ತಿರುವ ಖರ್ಚಿನಲ್ಲಿ ಗಣನೀಯ ಏರಿಕೆಯಾಗಿದೆ ಎಂಬುದಾಗಿ ವರದಿಯೊಂದು ತಿಳಿಸಿದೆ. ನಿವೃತ್ತಿಗೊಳ್ಳುತ್ತಿರುವ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿರುವಂತೆಯೇ, ಅವರ ಪಿಂಚಣಿಗಾಗಿ ಸ್ಥಾಪಿಸಲಾಗಿರುವ ನಿಧಿಯು ಬರಿದಾಗುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸುವುದಕ್ಕಾಗಿ ಚೀನಾವು ತನ್ನ ಉದ್ಯೋಗಿಗಳ ನಿವೃತ್ತಿ ವಯಸ್ಸನ್ನು ಹೆಚ್ಚಿಸಿದೆ ಎಂಬುದಾಗಿ ‘ಇನ್ಸೈಡ್ ಓವರ್’ ವರದಿ ಮಾಡಿದೆ.
‘ನಿವೃತ್ತಿ ವಯಸ್ಸಿನ ಏರಿಕೆಗೆ ಇರುವ ಏಕೈಕ ಕಾರಣವೆಂದರೆ, ಪಿಂಚಣಿ ನೀಡಲು ಹಣವಿಲ್ಲʼ ಎಂದು ಯುನಿವರ್ಸಿಟಿ ಆಫ್ ಟೆಕ್ನಾಲಜಿ ಸಿಡ್ನಿಯಲ್ಲಿ ಪ್ರೊಫೆಸರ್ ಹಾಗೂ ಚೀನಾಕ್ಕೆ ಸಂಬಂಧಿಸಿದ ವಿಷಯದಲ್ಲಿ ತಜ್ಞರೂ ಆಗಿರುವ ಫೆಂಗ್ ಚೋಂಗ್ಯಿ ‘ಎಪೋಕ್ ಟೈಮ್ಸ್’ಗೆ ನೀಡಿರುವ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
‘‘ಸ್ಥಳೀಯ ಸರಕಾರಗಳು ಪಿಂಚಣಿ ನಿಧಿಯ ಕೊರತೆಯನ್ನು ಎದುರಿಸುತ್ತಿವೆ ಹಾಗೂ ಈ ಅಂತರವನ್ನು ತುಂಬಲು ಸಾಧ್ಯವಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.





