ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಸೇವಾದಳದಿಂದ ಆಗಬೇಕಾಗಿದೆ: ರಮಾನಾಥ ರೈ

ಮಂಗಳೂರು : ಕಾಂಗ್ರೆಸ್ ಸೇವಾದಳವು ಅದರದ್ದೇ ಆದ ಉತ್ತಮ ಇತಿಹಾಸವನ್ನು ಹೊಂದಿದ್ದು ದೇಶದ ಇತಿಹಾಸವನ್ನು ತಿಳಿಸುವ ಕೆಲಸ ಸೇವಾದಳದಿಂದ ಆಗಬೇಕಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು.
ರವಿವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸೇವಾದಳ ಇದರ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಬ್ಲಾಕ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸೇವಾದಳವು ಒಂದು ಶಿಸ್ತಿನ ಸಂಘಟನೆಯಾಗಿದ್ದು ಇದಕ್ಕೆ ಯಾವುದೇ ರೀತಿಯ ಚ್ಯುತಿ ಬಾರದಂತೆ ಉತ್ತಮವಾದ ವ್ಯಕ್ತಿತ್ವವನ್ನು ಮೈಗೂಡಿಸಿಕೊಂಡು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಕರೆ ನೀಡಿದರು.
ಧ್ವಜಾರೋಹಣ ನೆರವೇರಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ರಾಮಚಂದ್ರ ಎಂ. ಮಾತನಾಡಿ ಸೇವಾದಳದ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಕರ್ನಾಟಕದಲ್ಲಿ ಪ್ರಪ್ರಥಮವಾಗಿ ದ.ಕ.ಜಿಲ್ಲೆಯಿಂದ ಆರಂಭಗೊಂಡಿದ್ದು ಮುಂದಿನ ದಿನಗಳಲ್ಲಿ ಮನೆ ಮನೆಗೆ ಕಾಂಗ್ರೆಸ್ ಸೇವಾದಳ ತಲುಪುವಂತಾಗಬೇಕು ಇದಕ್ಕಾಗಿ ಪ್ರತಿ ಜಿಲ್ಲೆ, ಬ್ಲಾಕ್ ಮಟ್ಟದಲ್ಲಿ ಸಂಚರಿಸಲು ನಾನು ಸದಾ ಸಿದ್ಧನಾಗಿದ್ದೇನೆ ಎಂದರು.
ಸೇವಾದಳ ರಾಜ್ಯ ಉಪಾಧ್ಯಕ್ಷೆ ಗಿರಿಜಾ ಉಗೇರೊ, ಕೆಪಿಸಿಸಿ ಸೇವಾದಳ ಮುಖ್ಯ ಶಿಕ್ಷಕ ಬಿ.ವಿಶ್ವನಾಥ ಬಜಾಲ್, ಕೆಪಿಸಿಸಿ ಸೇವಾದಳ ಮಾಜಿ ರಾಜ್ಯ ಉಸ್ತುವಾರಿ ಮಕ್ನಾಯ, ಜಿಲ್ಲಾ ಹಿಂದುಳಿದ ವರ್ಗ ಘಟಕಾದ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಜಿಲ್ಲಾ ಅಸಂಘಟಿತ ಕಾರ್ಮಿಕ ಘಟಕಾದ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಪಂಚಾಯತ್ ರಾಜ್ ಸಂಘದ ಜಿಲ್ಲಾಧ್ಯಕ್ಷ ಶುಭೋದಯ ಆಳ್ವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಎಂ.ಬಿ.ವಿಶ್ವನಾಥ ರೈ, ಉಮೇಶ್ ದಂಡೆಕೇರಿ, ಸದಾಶಿವ ಉಳ್ಳಾಲ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಸಿದ್ಧಕಟ್ಟೆ, ಫಝಲ್ ರಹೀಂ ಪುತ್ತೂರು, ನಝೀರ್ ಬಜಾಲ್, ಗಿರೀಶ್ ಶೆಟ್ಟಿ, ಫಯಾಝ್ ಮೊದಲಾದವರು ಭಾಗವಹಿಸಿದ್ದರು.
ಇದೇ ವೇಳೆ ಸೇವಾದಳದ ಸ್ಥಾಪಕ ಎನ್.ಎಸ್.ಹರಡೀಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಗೈಯಲಾಯಿತು, ಸೇವಾದಳದ ದಿವಂಗತ ಸುರೇಶ್ ಶೆಟ್ಟಿ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಮತ್ತು ಸೇವಾ ದಳದ ಪದಾಧಿಕಾರಿ ಗಳಿಗೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸೇವಾದಳ ನೂತನ ಅಧ್ಯಕ್ಷ ಜೋಕಿಂ ಡಿ' ಸೋಜ ಸ್ವಾಗತಿಸಿ, ಸಮೀರ್ ಪಜೀರ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕಾರ್ಯಕ್ರಮ ನಿರೂಪಿಸಿದರು.