‘ಬಲಿಜ' ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಸರಕಾರ ಬದ್ಧ: ಮುಖ್ಯಮಂತ್ರಿ ಬೊಮ್ಮಾಯಿ

ಬೆಂಗಳೂರು, ಮಾ.27: ‘ಹಿಂದುಳಿದಿರುವ ಬಲಿಜ ಸಮಾಜವನ್ನು ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಮುಂದೆ ಬರುವುದರ ಜೊತೆಗೆ, ಇಡೀ ಸಮಾಜವನ್ನು ಸರ್ವಾಂಗೀಣವಾಗಿ ಅಭಿವೃದ್ಧಿಗೊಳಿಸಲು ಸರಕಾರ ಬದ್ಧವಾಗಿದೆ' ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ರವಿವಾರ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಶ್ರೀ ಯೋಗಿ ನಾರೇಯಣಾ ಯತೀಂದ್ರರ(ಕೈವಾರ ತಾತಯ್ಯ) ಜಯಂತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುಗ ಪುರುಷರು ಅಂತಾ ಯುಗಕ್ಕೆ ಒಬ್ಬರು ಹುಟ್ಟುತ್ತಾರೆ. ಸಮಾಜದಲ್ಲಿ ಸ್ಪಷ್ಟತೆ ಇಲ್ಲದೇ ಗೊಂದಲವಿದ್ದಾಗ ಇಂತಹ ಯುಗಪುರುಷರು ಹುಟ್ಟುತ್ತಾರೆ. ಆ ಸಾಲಿಗೆ ಕೈವಾರ ತಾತಯ್ಯ ಸೇರುತ್ತಾರೆ. ಜ್ಞಾನಿಗಳ ಜ್ಞಾನ ಭಂಡಾರ ಕೆಲವೊಮ್ಮೆ ಸಮಾಜಕ್ಕೆ ಮುಟ್ಟೋದಿಲ್ಲ. ಆದರೆ, ಕೈವಾರ ತಾತಯ್ಯ ತಮ್ಮ ಕೀರ್ತನೆಗಳ ಮೂಲಕ ಸರಳವಾಗಿ ಸಾಮಾನ್ಯವಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದರು ಎಂದು ಅವರು ಹೇಳಿದರು.
ಕೈವಾರ ತಾತಯ್ಯ ನಮ್ಮ ನಡುವೆ ಇಲ್ಲ. ಆದರೆ, ಅವರ ತತ್ವಗಳು, ಕೀರ್ತನೆಗಳು, ವಿಚಾರಧಾರೆಗಳು ಇಂದಿಗೂ ನಮ್ಮ ನಡುವೆ ಇದೆ. ಸೂರ್ಯ-ಚಂದ್ರ ಇರುವವರಿಗೆ ಕೈವಾರ ತಾತಯ್ಯ ಸ್ಮರಿಸಲ್ಪಡುತ್ತಾರೆ. ಇಂತಹ ಯುಗ ಪುರುಷರನ್ನು ನೆನಪಿಟ್ಟುಕೊಳ್ಳಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಅವರ ಜಯಂತೆ ಆಚರಿಸುತ್ತಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ಸಂಸದ ಪಿ.ಸಿ.ಮೋಹನ್ ಸದಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಾರೆ. ಬಲಿಜ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಮಾಡುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದರು. ಇವರ ಕಳಕಳಿಯಿಂದಾಗಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಬಲಿಜ ಸಮಾಜವನ್ನು 2ಎಗೆ ಸೇರಿಸಿದರು ಎಂದು ಅವರು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ‘ಕನ್ನಡ ಮತ್ತು ಸಂಸ್ಕøತದಲ್ಲಿ ಪಾಂಡಿತ್ಯ ಪಡೆದಿದ್ದ ಕೈವಾರ ತಾತಯ್ಯ ಅವರ ಆಚಾರ, ವಿಚಾರಗಳು ಮುಂದಿನ ಪೀಳಿಗೆಗೆ ತಲುಪಬೇಕು ಎಂಬ ಉದ್ದೇಶದಿಂದ ಸರಕಾರದ ವತಿಯಿಂದ ಅವರ ಜಯಂತಿ ಆಚರಣೆ ಮಾಡಲಾಗುತ್ತಿದೆ. ಸಂಸದ ಪಿ.ಸಿ.ಮೋಹನ್ ಅವರ ಒತ್ತಡಕ್ಕೆ ಮಣಿದು ಪ್ರವರ್ಗ 3ಎ ನಲ್ಲಿದ್ದ ಜಲಿಜ ಸಮಾಜವನ್ನು 2ಎಗೆ ಸೇರಿಸಿದೆ. ಸರ್ವರಿಗೂ ಸಮಪಾಲು ಎಂಬ ಧ್ಯೇಯದಲ್ಲಿ ನಂಬಿಕೆ ಇಟ್ಟಿರುವವನು ನಾನು' ಎಂದರು.
ಕಾರ್ಯಕ್ರಮದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನೀಲ್ ಕುಮಾರ್, ವೈದ್ಯಕೀಯ ಮತ್ತು ಆರೋಗ್ಯ ಸಚಿವ ಡಾ.ಸುಧಾಕರ್, ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್, ಸಂಸದ ಪಿ.ಸಿ.ಮೋಹನ್, ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ, ಮಾಜಿ ಸಚಿವ ಮನೋಹರ್ ತಹಶೀಲ್ದಾರ್, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್, ಬಲಿಜ ಸಮಾಜದ ಮುಖಂಡರಾದ ಪರಿಮಳಾ ನಾಯ್ಡು, ವೇಣುಗೋಪಾಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







