ನಿಲ್ಲದ ಇಂಧನ ಬೆಲೆಯೇರಿಕೆ: ಪೆಟ್ರೋಲ್ 50 ಪೈಸೆ, ಡೀಸೆಲ್ 55 ಪೈಸೆ ಇನ್ನೂ ದುಬಾರಿ

ಹೊಸದಿಲ್ಲಿ,ಮಾ.27: ಜನಸಾಮಾನ್ಯರು,ಪ್ರತಿಪಕ್ಷಗಳು ಎಷ್ಟೇ ಬೊಬ್ಬೆ ಹೊಡೆದರೂ ಇಂಧನ ಬೆಲೆಗಳ ಏರಿಕೆಯ ನಾಗಾಲೋಟ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಕಂಡು ಬರುತ್ತಿಲ್ಲ. ರವಿವಾರವೂ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯನ್ನು 50 ಪೈಸೆ ಮತ್ತು ಡೀಸೆಲ್ ಬೆಲೆಯನ್ನು 55 ಪೈಸೆ ಹೆಚ್ಚಿಸಲಾಗಿದೆ.
ಇದರೊಂದಿಗೆ ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಇವೆರಡೂ ಇಂಧನಗಳ ಬೆಲೆಗಳಲ್ಲಿ ಅನುಕ್ರಮವಾಗಿ ಒಟ್ಟು 3.70 ರೂ.ಮತ್ತು 3.75 ರೂ.ಏರಿಕೆಯಾಗಿದೆ. ದಿಲ್ಲಿಯಲ್ಲೀಗ ಪ್ರತಿ ಲೀ.ಪೆಟ್ರೋಲ್ ಬೆಲೆ 98.61 ರೂ.ನಿಂದ 99.11 ರೂ.ಗೆ ಮತ್ತು ಡೀಸೆಲ್ ಬೆಲೆ 89.87 ರೂ.ನಿಂದ 90.42 ರೂ.ಗೆ ಜಿಗಿದಿವೆ.
ದೇಶಾದ್ಯಂತ ಇಂಧನ ದರಗಳನ್ನು ಹೆಚ್ಚಿಸಲಾಗಿದ್ದು, ಸ್ಥಳೀಯ ತೆರಿಗೆಗಳನ್ನು ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ. ಇಂಧನ ಬೆಲೆಗಳಲ್ಲಿ ನಾಲ್ಕೂವರೆ ತಿಂಗಳುಗಳ ಸ್ಥಿರತೆಯ ಬಳಿಕ ಮಾ.22ರಿಂದ ಇದು ಐದನೆಯ ಏರಿಕೆಯಾಗಿದೆ.
ಹಿಂದಿನ ನಾಲ್ಕು ಸಂದರ್ಭಗಳಲ್ಲಿ ಪ್ರತಿ ಬಾರಿ ಲೀ.ಗೆ ತಲಾ 80 ಪೈಸೆಯಂತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಲಾಗಿದ್ದು, 2017ರಲ್ಲಿ ದೈನಂದಿನ ಬೆಲೆ ಪರಿಷ್ಕರಣೆ ಆರಂಭಗೊಂಡಾಗಿನಿಂದ ಇವು ಒಂದು ದಿನದಲ್ಲಿಯ ತೀವ್ರ ಏರಿಕೆಯಾಗಿವೆ.







