ವಾರದೊಳಗೆ ಆರೋಗ್ಯ ಇಲಾಖೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆ ಈಡೇರಿಸಿ: ಭಾರತೀಯ ಮಜ್ದೂರ್ ಸಂಘ ಒತ್ತಾಯ
ಬೆಂಗಳೂರು, ಮಾ. 27: ಆರೋಗ್ಯ ಇಲಾಖೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಕಾರ್ಯ ನಿರ್ವಹಿಸುತ್ತಿರುವ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸೇವಾ ಭದ್ರತೆ ಹಾಗೂ ವೇತನ ಪರಿಷ್ಕರಣೆ ಕುರಿತ ಶ್ರೀನಿವಾಸಚಾರಿ ವರದಿ ಜಾರಿ ಮತ್ತು ವಿವಿಧ ಬೇಡಿಕೆಗಳನ್ನು ವಾರದೊಳಗೆ ಈಡೇರಿಸುವಂತೆ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರ ಸಂಘ ಹಾಗೂ ಭಾರತೀಯ ಮಜ್ದೂರ್ ಸಂಘ ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.
ಈ ಕುರಿತಂತೆ ಸಂಘದ ರಾಜ್ಯಾಧ್ಯಕ್ಷ ಶಂಕರ್ ಸುಲೇಗಾಂವ್ ಪ್ರಕಟನೆ ಹೊರಡಿಸಿದ್ದು, ಶ್ರೀನಿವಾಸಚಾರಿ ಸಮಿತಿ ವರದಿ ಸಲ್ಲಿಕೆಯಾಗಿದ್ದರೂ, ಇದುವರೆಗೆ ಅದರ ಅಂಶಗಳನ್ನು ರಾಜ್ಯ ಸರಕಾರ ಅನುಷ್ಟಾನಗೊಳಿಸಿಲ್ಲ. ಇದರಿಂದ ನೌಕರರ ಸ್ಥಿತಿ ಡೋಲಾಯಮಾನವಾಗಿದ್ದು, ಕೂಡಲೇ ಒಂದು ವಾರದಲ್ಲಿ ಇದರ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಶ್ರೀನಿವಾಸಚಾರಿ ವರದಿಯನ್ನು ಅನುಷ್ಟಾನ ಮಾಡುವುದಾಗಿ ಈಗಾಗಲೇ ಸದನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಡಾ.ಕೆ.ಸುಧಾಕರ್ ಭರವಸೆ ನೀಡಿದ್ದಾರೆ. ಅದರಂತೆ ಬರುವ ಒಂದು ವಾರದೊಳಗೆ ಗುತ್ತಿಗೆ, ಹೊರಗುತ್ತಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.





