ಬಿಜೆಪಿ ಒತ್ತಡ ಬಳಿಕ ನಿತೀಶ್ ಸಂಪುಟದಿಂದ 'ವಿಐಪಿ' ಮುಖ್ಯಸ್ಥ ವಜಾ

ನಿತೀಶ್ ಕುಮಾರ್
ಪಾಟ್ನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರವಿವಾರ ವಿಕಾಸಶೀಲ ಇನ್ಸಾನ್ ಪಾರ್ಟಿ (ವಿಐಪಿ) ಮುಖ್ಯಸ್ಥ ಮುಖೇಶ್ ಸಹಾನಿಯವರನ್ನು ರಾಜ್ಯ ಸಚಿವ ಸಂಪುಟದಿಂದ ವಜಾಗಳಿಸುವಂತೆ ರಾಜ್ಯಪಾಲ ಫಗು ಚೌಹಾಣ್ ಅವರಿಗೆ ಶಿಫಾರಸ್ಸು ಮಾಡಿದ್ದಾರೆ.
"ಮುಖೇಶ್ ಸಹಾನಿಯವರನ್ನು ಪಶುಸಂಗೋಪನೆ ಮತ್ತು ಮತ್ಸ್ಯ ಸಂಪನ್ಮೂಲ ಖಾತೆ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಬಿಜೆಪಿ ಲಿಖಿತ ಪತ್ರ ಬರೆದು ಒತ್ತಾಯಿಸಿದ ಹಿನ್ನೆಲೆಯಲ್ಲಿ ನಿತೀಶ್ ಅವರು ಈ ಸಂಬಂಧ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದಾರೆ" ಎಂದು ಮುಖ್ಯಮಂತ್ರಿ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
"ಸಹಾನಿ ಹಾಗೂ ಅವರ ವಿಐಪಿ ಬಿಹಾರದಲ್ಲಿ ಎನ್ಡಿಎ ಭಾಗವಾಗಿ ಉಳಿದಿಲ್ಲ. ಬಿಜೆಪಿ ಕೋಟಾದಿಂದ ಸಹಾನಿಯವರನ್ನು ಸಚಿವರಾಗಿ ಆಯ್ಕೆ ಮಾಡಲಾಗಿತ್ತು. ಇದೀಗ ಸಹಾನಿ ಎನ್ಡಿಎ ಕೂಟದಲ್ಲಿ ಇಲ್ಲದ ಕಾರಣ ತಕ್ಷಣ ಅವರನ್ನು ಸಂಪುಟ ಸಚಿವ ಸ್ಥಾನದಿಂದ ವಜಾಗೊಳಿಸಬೇಕು"' ಎಂದು ಬಿಜೆಪಿ ತನ್ನ ಪತ್ರದಲ್ಲಿ ಒತ್ತಾಯಿಸಿತ್ತು.
ಬಿಹಾರದ ಎನ್ಡಿಎ ಮೈತ್ರಿಕೂಟದ ಐದು ಪಕ್ಷಗಳಲ್ಲಿ ವಿಐಪಿ ಕೂಡಾ ಒಂದು. ಬಿಜೆಪಿಯ ಇತರ ಮಿತ್ರಪಕ್ಷಗಳೆಂದರೆ ಜೆಡಿಯು, ಎಚ್ಎಎಂಎಸ್ ಹಾಗೂ ರಾಷ್ಟ್ರೀಯ ಲೋಕ ಜನಶಕ್ತಿ ಪಕ್ಷ. ಇದಕ್ಕೂ ಮುನ್ನ ಕಳೆದ ಬುಧವಾರ ಸಹಾನಿ ನೇತೃತ್ವದ ವಿಐಪಿ ಪಕ್ಷದ ಮೂವರು ಶಾಸಕರಾದ ರಾಜು ಸಿಂಗ್, ಮಿಶ್ರಿ ಲಾಲ್ ಯಾದವ್ ಮತ್ತು ಸ್ವರ್ಣ ಸಿಂಗ್ ಅವರು ಬಿಜೆಪಿ ಸೇರಿದ್ದರು.