ಎಸೆಸೆಲ್ಸಿ ಪರೀಕ್ಷೆ; ದ.ಕ. ಜಿಲ್ಲೆಯಲ್ಲಿ ಪರೀಕ್ಷಾ ಕೇಂದ್ರಗಳತ್ತ ವಿದ್ಯಾರ್ಥಿಗಳು

ಮಂಗಳೂರು : ವಿದ್ಯಾರ್ಥಿಗಳ ಜೀವನದ ಮಹತ್ತರ ಘಟ್ಟವೆಂಧೇ ಪರಿಗಣಿಸಲಾಗುವ ಎಸೆಸೆಲ್ಸಿ ಪ್ರಸಕ್ತ ಸಾಲಿನ ಪರೀಕ್ಷೆ ಇಂದಿನಿಂದ ಆರಂಭಗೊಳ್ಳುತ್ತಿದ್ದು, ದ.ಕ. ಜಿಲ್ಲೆಯಲ್ಲಿ ಈಗಾಗಲೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳತ್ತ ಆಗಮಿಸುತ್ತಿದ್ದಾರೆ.
ಪೋಷಕರೂ ಕೇಂದ್ರಗಳ ಪ್ರವೇಶ ದ್ವಾರದವರೆಗೆ ಆಗಮಿಸಿ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಕೇಂದ್ರಗಳ ಸುತ್ತ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. ಕೇಂದ್ರಗಳ ಪ್ರವೇಶ ದ್ವಾರದಲ್ಲಿಯೇ ಮೇಲ್ವಿಚಾರಕರು ವಿದ್ಯಾರ್ಥಿಗಳ ನೋಂದಣಿ ಸಂಖ್ಯೆ ಪರಿಶೀಲಿಸಿ ಸಲಹೆ ಸೂಚನೆಗಳನ್ನು ನೀಡಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುವು ನೀಡುತ್ತಿದ್ದಾರೆ.
ಸದ್ಯ ವಿವಾದದ ಕೇಂದ್ರವಾಗಿರುವ ಹಿಜಾಬ್ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೇಂದ್ರಗಳ ಆವರಣದವರೆಗೂ ಹಿಜಾಬ್ ಧರಿಸಿ ಆಗಮಿಸುತ್ತಿರುವ ವಿದ್ಯಾರ್ಥಿನಿಯರು ಬಳಿಕ ಹಿಜಾಬ್ ತೆಗೆದಿರಿಸಿ ಪರೀಕ್ಷಾ ಕೊಠಡಿಗಳತ್ತ ತೆರಳುತ್ತಿದ್ದಾರೆ. ಇದೇ ವೇಳೆ ಖಾಸಗಿ ಶಾಲೆಗಳ, ಸಮವಸ್ತ್ರ ಜತೆಗೆ ಹಿಜಾಬ್ ಭಾಗವಾಗಿರುವ ಶಾಲೆಗಳ ವಿದ್ಯಾರ್ಥಿನಿಯರು ತಮ್ಮ ಶಾಲೆಯ ಮುಖ್ಯಸ್ಥರ ಅನುಮತಿ ಮೇರೆಗೆ ಹಿಜಾಬ್ ನೊಂದಿಗೆ ಪರೀಕ್ಷೆ ಬರೆಯಲು ಜಿಲ್ಲೆಯಲ್ಲಿ ಅವಕಾಶ ನೀಡಲಾಗಿದೆ.
ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಆರಂಭಗೊಳ್ಳಲಿದ್ದು ಅದಕ್ಕೆ ಮುಂಚಿತವಾಗಿ ವಿದ್ಯಾರ್ಥಿಗಳು ಕೇಂದ್ರದೊಳಗೆ ಪ್ರವೇಶಿಸಬೇಕಾಗಿದೆ. ಇಂದು ಪ್ರಥಮ ಭಾಷಾ ಪರೀಕ್ಷೆ ನಡೆಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 29,712 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಟ್ಟು 99 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವುದಕ್ಕೆ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಆದೇಶವನ್ನು ಅನುಸರಿಸಿಕೊಂಡು ಪರೀಕ್ಷೆ ನಡೆಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಸರ್ಕಾರಿ, ಅನುದಾನಿತ ಶಾಲೆಗಳ ವಿದ್ಯಾರ್ಥಿಗಳು ಸರ್ಕಾರ ನಿಗದಿಪಡಿಸಿದ ಸಮವಸ್ತ್ರದಲ್ಲಿ ಪರೀಕ್ಷೆ ಬರೆಯಲು ಸೂಚನೆ ನೀಡಲಾಗಿದ್ದು, ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಆಡಳಿತ ಮಂಡಳಿ ನಿಗದಿಪಡಿಸಿದ ಸಮವಸ್ತ್ರದಲ್ಲಿ ಪರೀಕ್ಷೆ ಬರೆಯಲು ಸೂಚನೆ, ಖಾಸಗಿ ಶಾಲೆಗಳಲ್ಲಿ ಸಮವಸ್ತ್ರದ ಭಾಗವಾಗಿ ಹಿಜಾಬ್ ಧರಿಸುತ್ತಿರುವ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಲು ಅವಕಾವಿದೆ. ಪರೀಕ್ಷಾ ಕೇಂದ್ರದ ಮುಖ್ಯಸ್ಥರಿಗೆ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ.