ಎಸೆಸೆಲ್ಸಿ ಪರೀಕ್ಷೆ; ದ.ಕ. ಜಿಲ್ಲೆಯಲ್ಲಿ 350 ವಿದ್ಯಾರ್ಥಿಗಳು ಗೈರು

ಸಾಂದರ್ಭಿಕ ಚಿತ್ರ
ಮಂಗಳೂರು : ದ.ಕ. ಜಿಲ್ಲೆಯ 99 ಪರೀಕ್ಷಾ ಕೇಂದ್ರಗಳಲ್ಲಿ ಇಂದು ಎಸೆಸೆಲ್ಸಿ ಪರೀಕ್ಷೆ ನಡೆದಿದ್ದು, ಒಟ್ಟು 350 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ತೀವ್ರ ಆತಂಕದ ಹೊರತಾಗಿಯೂ ನ್ಯಾಯಾಲಯದ ಆದೇಶ ಪಾಲನೆ, ಸರಕಾರದ ಸೂಚನೆಯ ಮೇರೆಗೆ ಇಂದು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ನಿಷೇಧಾಜ್ಞೆಯೊಂದಿಗೆ ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದ ಬಳಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಇಂದು ನಡೆದ ಪ್ರಥಮ ಭಾಷಾ ಪರೀಕ್ಷೆಗೆ ಸಾಮಾನ್ಯ ಪರೀಕ್ಷಾ ಕೇಂದ್ರಗಳಲ್ಲಿ ೨೮೬೧೧ ಮಂದಿ ಪ್ರಥಮವಾಗಿ ಪರೀಕ್ಷೆ ಬರೆಯುವವರು ಹಾಗೂ ೨೯ ಮಂದಿ ಪುನರಾವರ್ತಿತ ಸೇರಿ ಒಟ್ಟು ೨೮೬೪೦ ವಿದ್ಯಾರ್ಥಿಗಳಲ್ಲಿ ೨೮೪೨೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ೨೧೭ ವಿದ್ಯಾರ್ಥಿಗಳು ಗೈರಾಗಿದ್ದರು.
ಇದೇ ವೇಳೆ ಖಾಸಗಿ ಪರೀಕ್ಷಾ ಕೇಂದ್ರಗಳಲ್ಲಿ ನೋಂದಾಯಿಸಿದ್ದ ೮೭೮ ಪ್ರಥಮವಾಗಿ ಹಾಗೂ ೨೪ ಮಂದಿ ಪುನರಾವರ್ತಿತ ಸೇರಿ ಒಟ್ಟು ೯೦೨ ವಿದ್ಯಾರ್ಥಿಗಳಲ್ಲಿ ೧೩೩ ಮಂದಿ ಗೈರಾಗಿದ್ದು, ೭೬೯ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ದ.ಕ. ಜಿಲ್ಲಾ ಉಪನ ನಿರ್ದೇಶಕ ಸುಧಾಕರ್ ಕೆ. ತಿಳಿಸಿದ್ದಾರೆ.
ಬೆಳಗ್ಗೆ ೧೦.೩೦ ಗಂಟೆಯಿಂದ ೧.೪೫ರವೆಗೆ ಇಂದು ಪ್ರಥಮ ಭಾಷೆ (ಕನ್ನಡ ಅಥವಾ ಇಂಗ್ಲಿಷ್ ಅಥವಾ ಉರ್ದು) ಪರೀಕ್ಷೆ ನಡೆದಿದ್ದು, ಬುಧವಾರ ಮಾ. ೩೦ರಂದು ದ್ವಿತೀಯ ಭಾಷಾ ಪರೀಕ್ಷೆ ನಡೆಯಲಿದೆ.
ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಮೂಡುಬಿದಿರೆ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಒಟ್ಟು ೪೮ ಪರೀಕ್ಷಾ ಕೇಂದ್ರದಲ್ಲಿ ೧೨,೮೯೦ ವಿದ್ಯಾರ್ಥಿಗಳು ಸೋಮವಾರ ಪರೀಕ್ಷೆ ಬರೆಯಲು ಅವಕಾಶ ಪಡೆದಿದ್ದರು.
ಈ ಪೈಕಿ ಮೊದಲ ದಿನ ಮಂಗಳೂರು ದಕ್ಷಿಣ ಶಿಕ್ಷಣಾಧಿಕಾರಿ ಕಚೇರಿ ವ್ಯಾಪ್ತಿಯ ಒಟ್ಟು ೫೩೦೭ ವಿದ್ಯಾರ್ಥಿಗಳ ಪೈಕಿ ೫೨೬೩ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ೪೪ ಮಂದಿ ಗೈರು ಹಾಜರಾಗಿದ್ದಾರೆ. ಮಂಗಳೂರು ಉತ್ತರ ಶಿಕ್ಷಣಾಧಿಕಾರಿ ಕಚೇರಿಯ ವ್ಯಾಪ್ತಿಯ ಒಟ್ಟು ೫೨೫೦ ವಿದ್ಯಾರ್ಥಿಗಳ ಪೈಕಿ ೫೨೦೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ೪೩ ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಇನ್ನು ಖಾಸಗಿ ಪರೀಕ್ಷಾ ಕೇಂದ್ರಗಳ ಪೈಕಿ ಮಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯಲ್ಲಿ ೩೦೯ ವಿದ್ಯಾರ್ಥಿಗಳ ಪೈಕಿ ೨೬೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೪೭ ವಿದ್ಯಾರ್ಥಿಗಳು ಗೈರು ಹಾಗೂ ಮಂಗಳೂರು ಉತ್ತರದಲ್ಲಿ ೩೩೩ ವಿದ್ಯಾರ್ಥಿಗಳ ಪೈಕಿ ೨೮೩ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ೫೦ ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಡಿಸಿ, ಸಿಇಓ, ಡಿಡಿಪಿಐ ಭೇಟಿ
ಎಸೆಸೆಲ್ಸಿ ಪರೀಕ್ಷಾ ಕೇಂದ್ರ ವ್ಯಾಪ್ತಿಯಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಶಿಕ್ಷಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಜಂಟಿಯಾಗಿ ಕೈಗೊಂಡಿತ್ತು. ಹೀಗಾಗಿ ನಗರ/ಗ್ರಾಮಾಂತರ ಭಾಗದೆಲ್ಲೆಡೆ ಅಹಿತಕರ ಘಟನೆ ನಡೆಯದೆ ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆದರು. ನಗರದ ಕೆಲವು ಪರೀಕ್ಷಾ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಡಾರಾಜೇಂದ್ರ ಕೆ.ವಿ., ಜಿ.ಪಂ ಸಿಇಓ ಡಾ. ಕುಮಾರ್, ಡಿಡಿಪಿಐ ಸುಧಾಕರ್ ಸೇರಿದಂತೆ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದರು.