ಎರಡು ದಿನಗಳ ಭಾರತ ಬಂದ್: ಹಲವಾರು ರಾಜ್ಯಗಳಲ್ಲಿ ಅಗತ್ಯ ಸೇವೆಗಳಲ್ಲಿ ವ್ಯತ್ಯಯ

ಹೊಸದಿಲ್ಲಿ,ಮಾ.28: ಆರೆಸ್ಸೆಸ್ ಸಂಯೋಜಿತ ಬಿಎಂಎಸ್ ಹೊರತು ಪಡಿಸಿ ಎಲ್ಲ ರಾಜಕೀಯ ಪಕ್ಷಗಳಿಗೆ ಸೇರಿದ ಹಲವಾರು ಕೇಂದ್ರೀಯ ಕಾರ್ಮಿಕ ಒಕ್ಕೂಟಗಳು ನಡೆಸುತ್ತಿರುವ ಎರಡು ದಿನಗಳ ಭಾರತ ಬಂದ್ ಸೋಮವಾರ ಆರಂಭಗೊಂಡಿದ್ದು,ಹಲವಾರು ರಾಜ್ಯಗಳಲ್ಲಿ ಸಾರಿಗೆ ಮತ್ತು ಬ್ಯಾಂಕಿಂಗ್ ಸೇರಿದಂತೆ ಅಗತ್ಯ ಸೇವೆಗಳಲ್ಲಿ ವ್ಯತ್ಯಯವುಂಟಾಗಿತ್ತು. ನರೇಂದ್ರ ಮೋದಿ ಸರಕಾರವು 2019ರಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಬಳಿಕ ಇದು ಕಾರ್ಮಿಕ ಒಕ್ಕೂಟವು ಕರೆ ನೀಡಿರುವ ಇಂತಹ ಎರಡನೇ ರಾಷ್ಟ್ರವ್ಯಾಪಿ ಬಂದ್ ಆಗಿದೆ.
ಕೋವಿಡ್ ಲಾಕ್ಡೌನ್ನಿಂದಾಗಿ ಕುಸಿದಿದ್ದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಸಂದರ್ಭದಲ್ಲಿಯೇ ಭಾರತ ಬಂದ್ಗೆ ಕಾರ್ಮಿಕ ಒಕ್ಕೂಟಗಳು ಕರೆನೀಡಿವೆ. ಕುತೂಹಲದ ವಿಷಯವೆಂದರೆ ಮೂರು ಕೇಂದ್ರ ಕೃಷಿ ಕಾನೂನುಗಳ ವಿರುದ್ಧ ರೈತರ ಪ್ರತಿಭಟನೆಯ ನೇತೃತ್ವವನ್ನು ವಹಿಸಿದ್ದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್ಕೆಎಂ) ನಾಯಕತ್ವದೊಂದಿಗೆ ಸಮಾಲೋಚನೆಗಳ ಬಳಿಕ ಬಂದ್ ಕರೆಯನ್ನು ನೀಡಲಾಗಿತ್ತು. ರೈತರ ಮುಷ್ಕರ ನಡೆದಾಗಿನಿಂದ ಕನಿಷ್ಠ ಎಡಪಕ್ಷಗಳು ರೈತರು ಮತ್ತು ದುಡಿಯುವ ವರ್ಗದ ನಡುವೆ ಹೆಚ್ಚುತ್ತಿರುವ ಸಹಕ್ರಿಯೆಯ ಬಗ್ಗೆ ಮಾತನಾಡುತ್ತಿವೆ.
ಕಾರ್ಮಿಕ ಒಕ್ಕೂಟಗಳು 12 ಬೇಡಿಕೆಗಳನ್ನು ಮುಂದಿರಿಸಿ ಬಂದ್ ನಡೆಸುತ್ತಿವೆ. ಅಲ್ಲದೆ ಕೃಷಿ ಕಾಯ್ದೆಗಳನ್ನು ಹಿಂದೆಗೆದುಕೊಂಡ ಬಳಿಕ ಎಸ್ಕೆಎಂ ಮುಂದಿರಿಸಿರುವ ಆರು ಬೇಡಿಕೆಗಳನ್ನೂ ಈಡೇರಿಸುವಂತೆ ಅವು ಸರಕಾರವನ್ನು ಆಗ್ರಹಿಸಿವೆ.
ಕಾರ್ಮಿಕ ಸಂಹಿತೆಗಳು ಮತ್ತು ಅಗತ್ಯ ರಕ್ಷಣಾ ಸೇವೆಗಳ ಕಾಯ್ದೆಯನ್ನು ರದ್ದುಗೊಳಿಸಬೇಕು,ಖಾಸಗೀಕರಣ ಮತ್ತು ಸರಕಾರಿ ಉದ್ಯಮಗಳ ಆಸ್ತಿಯ ನಗದೀಕರಣವನ್ನು ನಿಲ್ಲಿಸಬೇಕು,ಆದಾಯ ತೆರಿಗೆಯನ್ನು ಪಾವತಿಸದ ಕುಟುಂಬಗಳಿಗೆ ಮಾಸಿಕ 7,500 ರೂ.ಗಳ ಆಹಾರ ಮತ್ತು ಆದಾಯ ಬೆಂಬಲವನ್ನು ಒದಗಿಸಬೇಕು,ನರೇಗಾಕ್ಕೆ ಹೆಚ್ಚಿನ ಅನುದಾನ ಮತ್ತು ನಗರ ಪ್ರದೇಶಗಳಿಗೂ ಯೋಜನೆಯ ವಿಸ್ತರಣೆ,ಎಲ್ಲ ಅನೌಪಚಾರಿಕ ಕೇತ್ರಗಳ ಕಾರ್ಮಿಕರಿಗೆ ಸಾರ್ವತ್ರಿಕ ಸಾಮಾಜಿಕ ಭದ್ರತೆ, ಅಂಗನವಾಡಿ,ಆಶಾ,ಮಧ್ಯಾಹ್ನದೂಟ ಮತ್ತು ಇತರ ಯೋಜನೆಗಳಡಿ ಕಾರ್ಮಿಕರಿಗೆ ಶಾಸನಬದ್ಧ ಕನಿಷ್ಠ ವೇತನ ಮತ್ತು ಸಾಮಾಜಿಕ ಭದ್ರತೆ ಹಾಗೂ ಸಾಂಕ್ರಾಮಿಕದ ನಡುವೆ ಜನರಿಗೆ ಸೇವೆಗಳನ್ನು ಸಲ್ಲಿಸುತ್ತಿರುವ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ ಸೂಕ್ತ ರಕ್ಷಣೆ ಮತ್ತು ವಿಮೆ ಸೌಲಭ್ಯ ಇವು ಕಾರ್ಮಿಕ ಒಕ್ಕೂಟಗಳ ಪ್ರಮುಖ ಬೇಡಿಕೆಗಳಲ್ಲಿ ಸೇರಿವೆ.