ಮಂಗಳೂರು: ಹಳೆಯ ಶಾಲಾ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನ

ಮಂಗಳೂರು : ವಿಂಡೋ ಟು ದಿ ಕ್ಲಾಸ್‌ರೂಮ್ - ನಮ್ಮ ಅಜ್ಜ ಅಜ್ಜಿಯರ ಶಾಲೆಗಳಿಗೆ ಮರುಭೇಟಿ’ ಎಂಬ ಶೀರ್ಷಿಕೆಯಡಿ ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಕಲ್ಚರಲ್ ಹೆರಿಟೇಜ್ (ಇಂಟಾಕ್) ನ ಮಂಗಳೂರು ಘಟಕದ ವತಿಯಿಂದ ದ.ಕ. ಜಿಲ್ಲೆಯ ಕೆಲವು ಹಳೆಯ ಶಾಲೆಗಳ ಛಾಯಾಚಿತ್ರಗಳು ಮತ್ತು ವಾಸ್ತುಶಿಲ್ಪದ ರೇಖಾಚಿತ್ರಗಳ ಪ್ರದರ್ಶನಕ್ಕೆ ಶನಿವಾರ ನಗರದ ನಗರದ ಬಲ್ಲಾಲ್ ಬಾಗ್‌ನ ಕೊಡಿಯಾಲ್‌ಗುತ್ತು ಕಲೆ ಮತ್ತು ಸಂಸ್ಕೃತಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು. ಮಾ.೩೦ರ ಪೂ.೧೧ರಿಂದ ಸಂಜೆ ೭ರ ತನಕ ಪ್ರದರ್ಶನ ನಡೆಯಲಿದೆ.
ಶತಮಾನ ದಾಟಿದ ಹಳೆಯ ಶಾಲೆಗಳನ್ನು ಗುರುತಿಸುವ ಯೋಜನೆಯನ್ನು ೨೦೧೮ರಲ್ಲಿ ನಿಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಚರ್‌ನ ಇಬ್ಬರು ವಿದ್ಯಾರ್ಥಿಗಳು ಇಂಟಾಕ್‌ನೊಂದಿಗೆ ಪ್ರಾರಂಭಿಸಿದ್ದರು. ಗುರುತಿಸಲಾದ ಸುಮಾರು ೩೦ ಶಾಲೆಗಳಲ್ಲಿ ೧೯ ಶಾಲೆಗಳ ಪಟ್ಟಿ ಮಾಡಲಾಗಿದೆ, ೮ ಶಾಲೆಗಳ ವಾಸ್ತುಶಾಸ್ತ್ರದ ದಾಖಲೆಗಳನ್ನು ಸಿದ್ಧಪಡಿಸಲಾಗಿದೆ. ಪುತ್ತೂರಿನ ಸರಕಾರಿ ಶಾಲೆಯನ್ನು ಕೆಡರುವುದು ಶತಮಾನ ದಾಟಿದ ಹಳೆಯ ಶಾಲೆಗಳನ್ನು ಪ್ರದರ್ಶನವಾಗಿ ಪ್ರಸ್ತುತಪಡಿಸಲು ಪ್ರೇರಣೆ ನೀಡಿತು ಎಂದು ಸಂಘಟಕರು ಮಾಹಿತಿ ನೀಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ದ.ಕ.ಜಿಲ್ಲಾ ಡಿಡಿಪಿಐ ಸುಧಾಕರ ಕೆ. ಮಾತನಾಡಿ ಪೂರ್ವಜರ ಪರಂಪರೆ ಯನ್ನು ಹೆಮ್ಮೆಯಿಂದ ಕಾಣಬೇಕಾಗಿದೆ. ಸರಕಾರವು ಪ್ರತಿ ಶಾಲೆಯ ವ್ಯಾಪ್ತಿಯಲ್ಲಿ ಪರಂಪರೆಯ ಮೂಲೆಯನ್ನು ಪ್ರಾರಂಭಿಸುವ ಮೂಲಕ ಇದೇ ರೀತಿಯ ಕೆಲಸವನ್ನು ಕೈಗೊಳ್ಳಲು ಯೋಜಿಸುತ್ತಿದೆ. ಈಗಾಗಲೇ ಎಂಟು ಶಾಲೆಗಳ ಅಭಿವೃದ್ಧಿಗೆ ೧೬.೫ ಲಕ್ಷ ರೂ.ಅನುದಾನ ಮಂಜೂರಾಗಿದೆ ಎಂದರು.
ನಿವೃತ್ತ ಮುಖ್ಯ ಶಿಕ್ಷಕಿ ವಿಮಲಾ ರಾವ್ ಮಾತನಾಡಿದರು. ಇಂಟಾಕ್ ಮಂಗಳೂರು ಘಟಕದ ಸಂಚಾಲಕ ಸುಭಾಷ್ ಬಸು ಸ್ವಾಗತಿಸಿದರು. ಶರ್ವಾಣಿ ಭಟ್ ಅತಿಥಿಗಳನ್ನು ಪರಿಚಯಿಸಿದರು.