ಸಾರ್ವತ್ರಿಕ ಮುಷ್ಕರಕ್ಕೆ ಬೆಂಬಲ; ಬ್ಯಾಂಕ್ ಅಧಿಕಾರಿ, ನೌಕರರ ಸಂಘಟನೆಗಳ ಪ್ರತಿಭಟನೆ

ಮಂಗಳೂರು : ರಾಷ್ಟ್ರೀಕೃತ ಬ್ಯಾಂಕ್‌ಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರಕಾರದ ಹುನ್ನಾರದ ವಿರುದ್ಧ ದೇಶಾದ್ಯಂತದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ಬ್ಯಾಂಕ್ ಅಧಿಕಾರಿಗಳ ಮತ್ತು ನೌಕರರ ಸಂಘಟನೆಗಳ ನೇತೃತ್ವದಲ್ಲಿ ಸೋಮವಾರ ನಗರದ ಕ್ಲಾಕ್‌ಟವರ್ ಬಳಿ ಪ್ರತಿಭಟನೆ ನಡೆಸಲಾಯಿತು.
ಬ್ಯಾಂಕ್ ಅಧಿಕಾರಿಗಳ ಸಂಘ, ಬ್ಯಾಂಕ್ ನೌಕರರ ಸಂಘ, ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ಆಫ್ ಇಂಡಿಯಾ ಸಂಘಟನೆಗಳ ನೂರಾರು ಅಧಿಕಾರಿಗಳು, ನೌಕರರು ಕ್ಲಾಕ್ ಟವರ್ ಬಳಿ ಜಮಾಯಿಸಿ ಕೇಂದ್ರ ಸರಕಾರದ ಧೋರಣೆಯ ವಿರುದ್ಧ ಕಿಡಿಕಾರಿದರು. 'ದುಡಿಮೆ ಯಾರದೋ... ಲಾಭ ಯಾರಿಗೋ?...' ಎಂಬ ಪದ್ಯ ಹಾಡಿ ಸರಕಾರವನ್ನು ಅಣಕಿಸಿದರು. ಬಡ ಗ್ರಾಹಕರು ತಮ್ಮ ದುಡಿಮೆಯ ಒಂದು ಪಾಲನ್ನು ಬ್ಯಾಂಕ್‌ನಲ್ಲಿ ಠೇವಣಿಯಲ್ಲಿಟ್ಟರೆ ಸರಕಾರ ಅದನ್ನು ಸಾರ್ವಜನಿಕರಿಗಾಗಿ ಉಪಯೋಗಕ್ಕೆ ಬಳಸದೆ ಬಂಡವಾಳ ಶಾಹಿಗಳ ಹಿತಕ್ಕೆ ಬಳಸುತ್ತಾರೆ. ಬ್ಯಾಂಕ್‌ಗಳ ಖಾಸಗೀಕರಣದಿಂದ ಗ್ರಾಮಾಂತರ ಪ್ರದೇಶದ ಜನರಿಗೆ ಸಮಸ್ಯೆ ಯಾಗಲಿದೆ. ಅನೇಕ ಬ್ಯಾಂಕ್‌ಗಳ ಶಾಖೆಗಳು ಮುಚ್ಚಲ್ಪಡುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಆತಂಕವಿದೆ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಬ್ಯಾಂಕ್ ಸಂಘಟನೆಗಳ ಮುಖಂಡರಾದ ವಿಲ್ಸನ್ ಡಿಸೋಜ, ಮಹೇಂದ್ರ ಮತ್ತಿತರರು ವಹಿಸಿದ್ದರು.