ಖಾಕಿ ಚಡ್ಡಿ, ಕರಿಟೋಪಿ ವಿರುದ್ಧ ಹೋರಾಡಿ: ಬಿ.ಕೆ.ಹರಿಪ್ರಸಾದ್

ಬೆಂಗಳೂರು, ಮಾ.28: ನಾಗಪುರದ ಖಾಕಿ ಚಡ್ಡಿ, ಕರಿಟೋಪಿಯ ಪ್ರಚಾರಕರ ಸುಳ್ಳಿನ ಕಂತೆಗಳ ವಿರುದ್ದ ಪ್ರಚಾರ ಮಾಡುವ ಜವಾಬ್ದಾರಿ ಕಾಂಗ್ರೆಸ್ ಕಾರ್ಯಕರ್ತರ ಮೇಲಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ಸೋಮವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನ, ಅಕ್ಷರ, ಆಶ್ರಯ, ಆರೋಗ್ಯ, ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಡಾ.ಎಂ.ಬಿ.ಪಾಟೀಲ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಹಾತ್ಮಾಗಾಂಧಿ ಅವರನ್ನು ಕೊಂದ ಸಂಘ ಪರಿವಾರದವರು, ನೆಹರೂ ಅವರ ವಿಚಾರ, ದೇಶದ ಇತಿಹಾಸ ತಿರುಚುವವರು ರಣ ಹೇಡಿಗಳು. ಇವರ ಬಗ್ಗೆ ತಾವು ಕಠಿಣ ನಿರ್ಧಾರ ತೆಗೆದುಕೊಳ್ಳಬೇಕು. ಅಲ್ಲದೆ, ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ಸ್, ಸಂಘ ಪರಿವಾರದವರು ಪಾಲ್ಗೊಂಡಿರಲಿಲ್ಲ ಎಂದರು.
ಇಂದು ಬಿಜಿಪಿ ಅವರು ಅಂಬೇಡ್ಕರ್, ನೆಹರು, ಮೌಲಾನಾ ಅಬ್ದುಲ್ ಕಲಾಂ ಅಜಾದ್, ರಾಜೇಂದ್ರ ಪ್ರಸಾದ್ ಅವರು ಸೇರಿ ಕೊಟ್ಟ ಸಂವಿಧಾನವನ್ನು ಬದಲಿಸಲು ಹೊರಟಿದ್ದಾರೆ. ನಾವೆಲ್ಲರೂ ಅದರ ವಿರುದ್ಧ ಹೋರಾಡಬೇಕಿದೆ ಎಂದು ಅವರು ನುಡಿದರು.







