ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಬಿಜೆಪಿ ಹಿಂದೂ ಜಪ: ಡಿ.ಕೆ.ಶಿವಕುಮಾರ್

ಬೆಂಗಳೂರು, ಮಾ.28: ಬಿಜೆಪಿ ನಾಯಕರಿಗೆ ಚುನಾವಣೆಯಲ್ಲಿ ಸೋಲಿನ ಭೀತಿ ಕಾಣುತ್ತಿದೆ. ಹೀಗಾಗಿಯೇ ಹಿಂದೂ, ಧರ್ಮದ ರಾಜಕಾರಣಕ್ಕೆ ಮುಂದಾಗಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಸೋಮವಾರ ಇಲ್ಲಿನ ಅರಮನೆ ಮೈದಾನದಲ್ಲಿ ಕೆಪಿಸಿಸಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನ, ಅಕ್ಷರ, ಆಶ್ರಯ, ಆರೋಗ್ಯ, ಅಭಿವೃದ್ಧಿಗಾಗಿ ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ ಡಾ.ಎಂ.ಬಿ.ಪಾಟೀಲ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಮುಖ್ಯವಾಗಿ ಮುಖ್ಯಮಂತ್ರಿ ಜಿಲ್ಲೆ ಹಾನಗಲ್, ಮಸ್ಕಿ ಸೇರಿದಂತೆ ವಿವಿಧೆಡೆ ವಿಧಾನ ಪರಿಷತ್‍ನಲ್ಲಿ ಕಾಂಗ್ರೆಸ್ 11 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಇನ್ನೂ, ಲೋಕಸಭಾ ಉಪಚುನಾವಣೆಯಲ್ಲಿ ಕೇವಲ 3 ಸಾವಿರ ಮತಗಳಲ್ಲಿ ಸೋತಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಗಿಂತ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ರಾಜ್ಯದ ಜನರ ತೀರ್ಪು ಏನು ಎಂದು ಪ್ರಕಟವಾಗಿದೆ. ಹಾಗಾಗಿ, ಚುನಾವಣೆಯಲ್ಲಿ ಸೋತ ನಂತರ ಬಿಜೆಪಿ ಸರಕಾರ ಜಾತಿ, ಧರ್ಮದ ಮೇಲೆ ಒಡೆಯುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು.
ಬಿಜೆಪಿಯವರದ್ದು ನಾವು ಹಿಂದೂಗಳು ನಾವು ಮುಂದೆ ಎಂಬ ನೀತಿ, ಆದರೆ ನಮ್ಮದು ನಾವು ಹಿಂದೂ, ಮುಸಲ್ಮಾನರು, ಸಿಖ್ಖರು, ಕ್ರೈಸ್ತರು, ಒಕ್ಕಲಿಗರು, ಲಿಂಗಾಯತರು, ಪರಿಶಿಷ್ಟರು, ಹಿಂದುಳಿದವರು ಎಲ್ಲರೂ ಒಂದು ಎಂಬ ನೀತಿ. ಇದೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದು ಅವರು ತಿಳಿಸಿದರು.
ಪಂಚರಾಜ್ಯ ಚುನಾವಣೆಯಲ್ಲಿ ಹಿನ್ನಡೆ ಆಯ್ತು ಎಂದು ಆತ್ಮಸ್ಥೈರ್ಯ ಕಳೆದುಕೊಳ್ಳುವುದು ಬೇಡ. ನಾವೆಲ್ಲ ಕಾಂಗ್ರೆಸ್ ಕಾರ್ಯಕರ್ತರು. ನಾವೆಲ್ಲರೂ ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮಗೆ ಸೋನಿಯಾಗಾಂಧಿ, ರಾಹುಲ್‍ಗಾಂಧಿ ಹಾಗೂ ಪ್ರಿಯಾಂಕಾಗಾಂಧಿ ಅವರ ನಾಯಕತ್ವ ಇದೆ. ನಾವು ಹಳ್ಳಿ ಹಳ್ಳಿಗೆ ನಮ್ಮ ಆಚಾರ ವಿಚಾರವನ್ನು ತೆಗೆದುಕೊಂಡು ಹೋಗಿ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದು ಡಿ.ಕೆ.ಶಿವಕುಮಾರ್ ನುಡಿದರು.
ಇಂದು ನಾವೆಲ್ಲರೂ ಎಂ.ಬಿ.ಪಾಟೀಲ್ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡುತ್ತಿದ್ದೇವೆ. ಅವರ ಹೋರಾಟದ ಬಗ್ಗೆ ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಅಧ್ಯಕ್ಷನಾಗಿ ನನ್ನ ಕಾರ್ಯಕಾರಿ ಸದಸ್ಯರು ಎಲ್ಲರೂ ನಿಮ್ಮ ಜತೆ ನಿಂತು ನಿಮಗೆ ಶಕ್ತಿ ನೀಡುತ್ತೇವೆ. ಈ ಸಂದರ್ಭದಲ್ಲಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.







