ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ನೌಕರರ ಪ್ರತಿಭಟನೆ

ಬೆಂಗಳೂರು,ಮಾ.28: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯಾದ್ಯಂತ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.
ಮೈಸೂರು: ನಗರದ ಕೆನರಾ ಬ್ಯಾಂಕ್ ಪ್ರಾದೇಶಿಕ ಕಛೇರಿ ಎದರು ಸೋಮವಾರ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಮಾತನಾಡಿ ಸಾರ್ವಜನಿಕ ವಲಯದ ಬ್ಯಾಂಕ್ ಗಳನ್ನು ಬಲಪಡಿಸಿ, ಬ್ಯಾಂಕ್ ಗಳ ಖಾಸಗೀಕರಣವನ್ನು ನಿಲ್ಲಿಸಿ, ಕೊಟ್ಟ ಸಾಲಗಳ ವಸೂಲಾತಿಯನ್ನು ಪ್ರಾರಂಭಿಸಿ, ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರವನ್ನು ಹೆಚ್ಚಿಸಿ, ಹೆಚ್ಚಿನ ಸೇವಾಶುಲ್ಕದೊಂದಿಗೆ ಗ್ರಾಹಕರಿಗೆ ಹೊರೆಯಾಗಬೇಡಿ, ಎನ್ ಪಿಎಸ್ ತೆಗೆದುಹಾಕಿ, ಡಿಎ ಲಿಂಕ್ಸ್ ಪಿಂಚಣಿಯೋಜನೆಯನ್ನು ಮರುಸ್ಥಾಪಿಸಿ, ಹೊರಗುತ್ತಿಗೆ ನಿಲ್ಲಿಸಿ, ನೇಮಕಾತಿಗಳನ್ನು ಪ್ರಾರಂಭಿಸಿ, ಎಲ್ಲಾ ಗುತ್ತಿಗೆ ನೌಕರರು ಮತ್ತು ಬಿಸಿ ಕ್ರಮಗಳನ್ನು ಕ್ರಮಬದ್ಧಗೊಳಿಸಿ ಎಂದು ಒತ್ತಾಯಿಸಿದರು.
ದಾವಣಗೆರೆ: ನಗರದ ಜಯದೇವ ವೃತ್ತದಿಂದ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವಿವಿಧ ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಬಳಿಕ ಜಯದೇವ ವೃತ್ತದಿಂದ ಶಿವಪಯ್ಯ ವೃತ್ತಕ್ಕೆ ತೆರಳುವ ರಸ್ತೆಯಲ್ಲಿ ಬಹಿರಂಗ ಸಭೆ ನಡೆಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿಗಳ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜೆಸಿಟಿಯು ಮುಖಂಡ ಆವರಗೆರೆ ಉಮೇಶ್, ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಬೇಕು. ಎಲ್ಲಾ ಕೃಷಿ ಉತ್ಪನ್ನಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ಖಾತ್ರಿ ಪಡಿಸಬೇಕು. ವಿದ್ಯುತ್‍ಚ್ಛಕ್ತಿ ಮಸೂದೆ ಹಿಂಪಡೆಯಬೇಕು. ಸಾರ್ವಜನಿಕ ಉದ್ಯಮಗಳ ಖಾಸಗಿಕರಣ ತಡೆಯಬೇಕು. ಎನ್‍ಎಂಪಿ ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಎಐಟಿಯುಸಿ ಮುಖಂಡ ರಾಘವೇಂದ್ರ ನಾಯರಿ ಮಾತನಾಡಿ, ಆದಾಯ ತೆರಿಗೆ ಪಾವತಿಸದ ಕುಟುಂಬಗಳಿಗೆ ಮಾಸಿಕ 7500 ರೂ.ಗಳ ಆಹಾರ ಮತ್ತು ಆದಾಯ ಬೆಂಬಲ ನೀಡಬೇಕು. ನರೇಗಾಕ್ಕೆ ಹೆಚ್ಚಿನ ನಿಧಿ ನೀಡಿ ಉದ್ಯೋಗ ಖಾತ್ರಿ ಯೋಜನೆಯನ್ನು ನಗರಗಳಿಗೂ ವಿಸ್ತರಿಸಬೇಕು. ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಒದಗಿಸಬೇಕು. ಕಟ್ಟಡ ಕಾರ್ಮಿಕ ಮಂಡಳಿಯ ಅಕ್ರಮಗಳನ್ನು ತಡೆಗಟ್ಟಿ ಬೋಗಸ್ ಕಾರ್ಡ್‍ಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಕೋಲಾರ: ಕೇಂದ್ರ ಸರಕಾರಿ ನೌಕರರ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೋಮವಾರ ಜಿಲ್ಲಾ ಅಂಚೆ ನೌಕರರ ಸಂಘದ ಸದಸ್ಯರು ನಗರದ ಪಿ.ಸಿ.ಬಡಾವಣೆಯಲ್ಲಿರುವ ಕೇಂದ್ರ ಅಂಚೆ ಕಚೇರಿ ಬಳಿ ಪ್ರತಿಭಟನಾ ಮುಷ್ಕರ ನಡೆಸಿದರು.
ಈ ಸಂಧರ್ಭದಲ್ಲಿ ಮಾತನಾಡಿದ ಅಂಚೆ ನೌಕರರ ಸಂಘದ ಪದಾಧಿಕಾರಿಗಳು ಕೇಂದ್ರ ಸರ್ಕಾರವನ್ನು ಹಲವಾರು ವರ್ಷಗಳಿಂದ ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುತ್ತಾ ಬರುತ್ತಿದ್ದರೂ ಕಿವಿ ಕೊಡದ ಕಾರಣ ರಾಷ್ಟ್ರವ್ಯಾಪಿ ಸಾಮಾನ್ಯ ಮುಷ್ಕರವನ್ನು ಎರಡು ದಿನಗಳ ಕಾಲ ನಡೆಸುತ್ತಿರುವುದು ಅನಿವಾರ್ಯ ವಾಗಿದೆಯೆಂದರು.
ಕೇಂದ್ರ ಸರ್ಕಾರ ತಕ್ಷಣ ಕೇಂದ್ರ ಸರ್ಕಾರಿ ನೌಕರರ ಬೇಡಿಕೆಗಳಾದ ಸ್ಕ್ಯಾಪ್ ಎನ್.ಪಿ.ಎಸ್,ಓ.ಪಿ.ಎಸ್ ಗಳನ್ನು ಮರುಸ್ಥಾಪಿಸ ಬೇಕು,ಜನವರಿ 20 ರಿಂದ ಜೂನ್ 21 ರವರೆಗೆ ತಡೆ ಹಿಡಿದಿರುವ ಡಿ.ಎ,ಡಿ.ಆರ್ ಬಾಕಿಗಳನ್ನು ಪಾವತಿಸಬೇಕು,ಪಿ.ಎಸ್.ಯು, ರೈಲ್ವೆ, ರಕ್ಷಣೆ, ಅಂಚೆ,ವಿಮಾ,ಬ್ಯಾಂಕ್ ಗಳ ಖಾಸಗೀಕರಣ, ಕಾರ್ಪೊರೇಟೀಕರಣ ನಿಲ್ಲಿಸಬೇಕು,ಗ್ರಾಮೀಣ ಡಾಕ್ ಸೇವಕರಿಗೆ ನಾಗರೀಕ ಸೇವಕ ಸ್ಥಾನಮಾನ ನೀಡುವ ಮೂಲಕ ಅವರ ಸೇವೆಯನ್ನು ಕ್ರಮಬ್ದಗೊಳಿಸಬೇಕು,ಬಡ್ತಿಗಾಗಿ ಬೆಂಚ್ ಮಾರ್ಕ ಪದ್ದತಿ ಹಿಂತೆಗೆಯ ಬೇಕು,ಸಹಾನು ಭೂತಿಯ ನೇಮಕಾತಿಗಳ ಮೇಲಿನ ಶೇ 5 ರ ಸೀಲಿಂಗ್ ತೆಗೆಯಬೇಕು,ಗುತ್ತಿಗೆ,ಸಾಂದರ್ಭಿಕ ಕೆಲಸಗಾರರನ್ನು ಕ್ರಮಬದ್ದಗೊಳಿಸಬೇಕು, 8 ನೇ ಕೇಂದ್ರ ವೇತನ ಆಯೋಗ ರಚನೆ ಮಾಡುವುದರೊಂದಿಗೆ ಇತರ ಬೇಡಿಕೆಗಳನ್ನು ಈಡೇರಿಸುವಂತೆ ಅವರುಗಳು ಆಗ್ರಹಿಸಿದರು.
ಮುಷ್ಕರ 28-29 ರಂದು ನಡೆಯಲಿದ್ದು, ಮುಷ್ಕರದಲ್ಲಿ ಅಂಚೆ ನೌಕರರು,ಬ್ಯಾಂಕ್ ನೌಕರರು,ಜೀವ ವಿಮಾ ನೌಕರರು, ಕೇಂದ್ರ ಸರ್ಕಾರಿ ನೌಕರರು ಭಾಗವಹಿಸಿದ್ದಾರೆಂದು ತಿಳಿಸಿದರಲ್ಲದೆ ಸಾರ್ವಜನಿಕರು ಮುಷ್ಕರಕ್ಕೆ ಸಹಕಾರ ನೀಡುವಂತೆ ಅವರುಗಳು ವಿನಂತಿಸಿದರು.
ಮುಷ್ಕರ ನೇತೃತ್ವವನ್ನು ಸಂಘದ ಅಧ್ಯಕ್ಷ ಎನ್.ಕೃಷ್ಣಪ್ಪ, ಕಾರ್ಯದರ್ಶಿ ಗಳಾದ ಎಂ.ಜಿ.ರಮೇಶ್, ರಾಮ್ ರಾವ್,ರಾಮಪ್ಪ,
ಖಜಾಂಜಿ ಎಸ್. ವೀರಭದ್ರಪ್ಪ, ಮುಖಂಡರುಗಳಾದ ಬಿ.ಎಂ.ಮಂಜುನಾಥ್, ಬಿ.ವಿ.ಸತೀಶ್ ಕುಮಾರ್,ಎಂ.ಕರುಣಾಕರ, ಹೆಚ್.ಎಂ.ರಾಜು,ಎಸ್.ನರಸಿಂಹಪ್ಪ, ಕೆ.ಎನ್.ಗಂಗಾಧರ್,ಎಂ.ಹೆಚ್.ಮಹಮ್ಮದ್ ಷಫೀ, ಇರಗಪ್ಪ,ಎ.ಶಶಿಕುಮಾರ್ ಮುಂತಾದವರು ವಹಿಸಿದ್ದರು.









