ಚುನಾವಣೆಗಳು ‘ಜನಾದೇಶ’ವಾಗುವ ಬದಲು ‘ಧನಾದೇಶ’ವಾಗುತ್ತಿವೆ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು, ಮಾ.28: ಚುನಾವಣೆ ಒಂದು ಅಭೂತಪೂರ್ವ ಪ್ರಜಾಪ್ರಭುತ್ವದ ಪ್ರಯೋಗ. ಭಾರತವು ವಿಶ್ವದ ಇತಿಹಾಸದಲ್ಲೆ ಅತೀ ಬೃಹತ್ ಗಾತ್ರದ ಚುನಾವಣೆ ವ್ಯವಸ್ಥೆ ಹೊಂದಿದೆ ಮತ್ತು ಯಶಸ್ವಿಯಾಗಿ ನಿರ್ವಹಿಸಿ ವಿಶ್ವಮಾನ್ಯತೆ ಪಡೆದಿದೆ. ಭಾರತದ ಪ್ರಜಾಪ್ರಭುತ್ವ ಹಾಗೂ ಚುನಾವಣಾ ಆಯೋಗಕ್ಕೆ ಇದು ಹೆಮ್ಮೆ ಪಡುವ ವಿಷಯವಾಗಿರುವುದರಲ್ಲಿ ಅನುಮಾನವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದ ಅವರು, ಈ ಹೆಮ್ಮೆ 1970ರ ನಂತರದ ದಶಕಗಳ ಚುನಾವಣೆಗಳಿಂದ ವಿಭಿನ್ನ ದಾರಿ ತುಳಿದಿರುವುದು ವಿಷಾದನೀಯ. ಇತ್ತೀಚೆಗೆ ಚುನಾವಣೆಗಳು ಹಣ, ಜಾತಿ, ತೋಳು ಬಲದಿಂದ ಕೂಡಿರುವುದು ಸರ್ವರಿಗೂ ತಿಳಿದಿರುವ ವಿಷಯ ಎಂದರು.
ಚುನಾವಣಾ ಆಯೋಗ ಜಾರಿಗೊಳಿಸುವ ಚುನಾವಣಾ ನೀತಿ ಸಂಹಿತೆಯನ್ನು ಗಾಳಿಗೆ ತೂರಿ ಪರಸ್ಪರ ಕೀಳು ನಿಂದನೆಗಳು, ದ್ವೇಷ ದಳ್ಳುರಿಗಳನ್ನುಂಟು ಮಾಡುವ ಭಾಷಣಗಳು, ಎಲ್ಲೆ ಮೀರಿದ ಚುನಾವಣಾ ಅಕ್ರಮಗಳು ಹೆಚ್ಚಾಗಿವೆ. ಕ್ರಿಮಿನಲ್ ಆಪಾದನೆಗೊಳಗಾದವರ ಸ್ಪರ್ಧೆ ಮುಂದುವರೆದಿದೆ. ಒಂದೊಂದು ಮಹಾ ಚುನಾವಣೆಯ ವೆಚ್ಚದಲ್ಲಿ ಒಂದೊಂದು ರಾಜ್ಯವನ್ನೆ ಅಭಿವೃದ್ಧಿ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಚುನಾವಣೆಗಳಿಗಾಗಿ ಸರಕಾರದ ಸಾವಿರಾರು ಕೋಟಿ ವೆಚ್ಚವಲ್ಲದೆ ಪಕ್ಷ ಮತ್ತು ಸ್ಪರ್ಧಿಗಳು ಸಾವಿರಾರು ಕೋಟಿಗಳು ವೆಚ್ಚ ಮಾಡಿರುವುದನ್ನು ಪರಿಗಣಿಸಿದರೆ ಆ ವೆಚ್ಚದಲ್ಲಿ ಒಂದು ಚಿಕ್ಕ ರಾಜ್ಯವನ್ನು ಅಭಿವೃದ್ಧಿಪಡಿಸಬಹುದು. ರಾಜಕೀಯದ ಅಧೋಗತಿಯೋ ಭಾರತದ ಚುನಾವಣಾ ವ್ಯವಸ್ಥೆಯ ರೋಗಗ್ರಸ್ಥ ಸ್ಥಿತಿಯೋ ತಿಳಿಯದು. ಅಥವಾ ಇವೆರಡೂ ಆಗಿದ್ದರೆ ರೋಗ ಉಲ್ಭಣಿಸುವ ಮೊದಲೆ ಚಿಕಿತ್ಸೆಯನ್ನು ಮಾಡಬೇಕಾದವರು ಶಾಸನ ಸಭೆಯ ಸದಸ್ಯರುಗಳಲ್ಲದೆ ಮತ್ತಾರು? ಎಂದು ಸ್ಪೀಕರ್ ಪ್ರಶ್ನಿಸಿದರು.
ಜನಾದೇಶ-ಧನಾದೇಶ: ಚುನಾವಣೆಗಳಲ್ಲಿ ಅಸಹ್ಯ ಪಡುವಷ್ಟು ಹಣಶಕ್ತಿಯ ಪಾತ್ರ ಇಡೀ ವ್ಯವಸ್ಥೆಗೆ ರೋಗತರುವಷ್ಟು ಅಪರಾಧಿಗಳ ಪಾತ್ರ, ಜಾತಿ, ಧರ್ಮ, ಲಿಂಗ ಮತ್ತೆಲ್ಲ ತರಹದ ಪ್ರಭಾವಗಳು ಚುನಾವಣೆಗಳನ್ನು ರೋಗಗ್ರಸ್ತವಾಗಿಸಿವೆ. ಚುನಾವಣೆಗಳು ‘ಜನಾದೇಶ’ವಾಗುವ ಬದಲು ‘ಧನಾದೇಶ’ವಾಗುತ್ತಿವೆ ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಅಪರಾಧೀಕರಣ ಹಿನ್ನೆಲೆಯಿಂದ ಕಾನೂನಿನ ಶಿಕ್ಷೆಗೊಳಗಾಗಬೇಕಾದ ಅಪರಾಧ ಹೊತ್ತವರೇ ಸ್ಪರ್ಧಿಸುತ್ತಿರುವುದರಿಂದ ಚುನಾವಣೆಗಳಲ್ಲಿ ಸಮಾನಾಂತರ ಸ್ಪರ್ಧೆ ಕ್ಷೀಣಿಸಿದೆ. ಇಂತಹ ಚುನಾವಣಾ ವ್ಯವಸ್ಥೆಯು ಇಡೀ ರಾಜಕೀಯ ವ್ಯವಸ್ಥೆಯ ಇತರ ರೋಗರುಜಿನಗಳಿಗೆ ಮೂಲವೂ ಮತ್ತು ಪೋಷಕವೂ ಆಗಿದೆ ಎಂದು ಅವರು ಹೇಳಿದರು
ವಿಧಾನಪರಿಷತ್ತಿಗೆ ದ್ವೈವಾರ್ಷಿಕವಾಗಿ ಪದವೀಧರ, ಶಿಕ್ಷಕರ ಕ್ಷೇತ್ರದಿಂದ ನಡೆಯುವ ಚುನಾವಣೆಗಳು ಹಾಗೂ ನಾಮ ನಿರ್ದೇಶನದಲ್ಲೂ ಕಲುಷಿತ ವಾತಾವರಣ ಕಂಡು ಬರುತ್ತದೆ. ಇಲ್ಲಿಯೂ ಸುಧಾರಣೆಯ ಅಗತ್ಯತೆ ಕಂಡು ಬರುತ್ತಿದೆ ಎಂದು ಸ್ಪೀಕರ್ ತಿಳಿಸಿದರು.
ಇತ್ತೀಚೆಗಿನ ಚುನಾವಣೆಗಳ ಫಲಿತಾಂಶ. ಮತದಾನ ನಡೆಯುವ ರೀತಿ, ಜನ ಪ್ರತಿನಿಧಿಗಳ ಕಾರ್ಯವೈಖರಿ, ಸಂಸದೀಯ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ಸದನಗಳ ಕಾರ್ಯ ನಿರ್ವಹಣೆಯ ಮೌಲ್ಯಗಳು, ಆಡಳಿತ ವ್ಯವಸ್ಥೆಯ ಬಗ್ಗೆ ಆತ್ಮಾವಲೋಕನ ಮಾಡುವಂತಹ ಸಂದರ್ಭ ಬಂದೊದಗಿದೆ ಎಂದು ಅವರು ಹೇಳಿದರು.
ಭ್ರಷ್ಟಾಚಾರ ಮತ್ತು ಭ್ರಷ್ಟರನ್ನು ತೊಡೆದು ಹಾಕಲು ನಮ್ಮ ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಕವಾದ ಸುಧಾರಣೆಗಳನ್ನು ತರುವುದು ಅನಿವಾರ್ಯವಾಗಿದೆ. ಚುನಾವಣಾ ಆಯೋಗ, ಕಾನೂನು ಆಯೋಗ, ತಾರಕುಂಡೆ ಸಮಿತಿ, ದಿನೇಶ್ ಗೋಸ್ವಾಮಿ ಸಮಿತಿ, ಆಡಳಿತ ಸುಧಾರಣಾ ಆಯೋಗ ಮುಂತಾದ ಸರಕಾರಿ ಮತ್ತು ಖಾಸಗಿ ಆಯೋಗ, ಸಮಿತಿಗಳು ಹಾಗೂ ರಾಜಕೀಯ ವ್ಯವಸ್ಥೆಯ ಅನೇಕ ವಿಶ್ಲೇಷಕರು ಈ ಚರ್ಚೆಯನ್ನು ಮುಂದುವರೆಸಿದ್ದಾರೆ ಎಂದು ಅವರು ತಿಳಿಸಿದರು.







