ಅನಕ್ಷರತೆ-ಆರ್ಥಿಕ ಅಸಮಾನತೆ ಚುನಾವಣಾ ಭ್ರಷ್ಟಾಚಾರಕ್ಕೆ ಕಾರಣ: ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು, ಮಾ.28: ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಪ್ರಮುಖ ಕಾರಣಗಳೆಂದರೆ ಅನಕ್ಷರತೆಯನ್ನು ಹೊಂದಿರುವ ದೊಡ್ಡ ಜನಸಂಖ್ಯೆ ಹಾಗೂ ಆರ್ಥಿಕ ಅಸಮಾನತೆ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ಸೋಮವಾರ ವಿಧಾನಸಭೆಯಲ್ಲಿ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯತೆ’ಗಳ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದ ಅವರು, ಚುನಾವಣೆಗಳ ರಾಜಕೀಯ ಮತ್ತು ಸಾಮಾಜಿಕ ನಿಧಿಯ ಪಾರದರ್ಶಕತೆಯ ಕೊರತೆ, ಆದಾಯದ ಅಸಮಾನತೆಗಳು, ತೋಳ್ಬಲ ಮತ್ತು ಹಣದ ಬಲ, ಬಹು ಪಕ್ಷ ವ್ಯವಸ್ಥೆ ಹಾಗೂ ಆಗಾಗ್ಗೆ ಬರುವಂತಹ ಚುನಾವಣೆಗಳು ಭ್ರಷ್ಟಾಚಾರಕ್ಕೆ ಕಾರಣಗಳು ಎಂದರು.
ರಾಜಕೀಯದಲ್ಲಿ ಕೋಮುವಾದ ಮತ್ತು ಅಪರಾಧೀಕರಣ, ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಸಮುದಾಯದ ಭಾಗವಹಿಸುವಿಕೆಯ ಕೊರತೆ, ಬದ್ಧತೆಯಿಂದ ಚುನಾವಣೆಯಲ್ಲಿ ತೊಡಗಿಸಿಕೊಳ್ಳದ ನಿರಾಸಕ್ತ ಯುವ ಜನಾಂಗ, ಚುನಾವಣೆಗಳಲ್ಲಿ ಧಾರ್ಮಿಕ ಸಂಸ್ಥೆಗಳ ಪ್ರಭಾವ, ಸಂಸದೀಯ ಮೌಲ್ಯ, ಮಾನವೀಯ ಹಾಗೂ ನೈತಿಕ ಮೌಲ್ಯಗಳ ಕುಸಿತ, ಕಪ್ಪು ಹಣದ ಮಿತಿಮೀರಿದ ಗಳಿಕೆ ಮತ್ತು ಬಳಕೆಯೂ ಭ್ರಷ್ಟಾಚಾರಕ್ಕೆ ಕಾರಣ ಎಂದು ಅವರು ಹೇಳಿದರು.
ಮತದಾನದಲ್ಲಿ ಭಾಗಿಯಾಗದವರಿಗೆ ದಂಡ, ಶಿಕ್ಷೆ ಇಲ್ಲದಿರುವುದು, ಸ್ಪರ್ಧೆಯಲ್ಲಿ ಹೆಚ್ಚಾದ ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು, ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದಂತಹ ಅಭ್ಯರ್ಥಿಗಳ ಆಯ್ಕೆ, ಪಕ್ಷಗಳು ಗಳಿಸುವ ಮತಗಳು ಮತ್ತು ಸ್ಥಾನಗಳ ಸಂಖ್ಯೆಯಲ್ಲಿನ ಅಂತರ ಭಾರತೀಯ ಪ್ರಜಾಪ್ರಭುತ್ವದ ಚುನಾವಣಾ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕೆ ಕಾರಣವಾಗಿವೆ ಎಂದು ಸ್ಪೀಕರ್ ಹೇಳಿದರು.
ಚುನಾವಣಾ ಸುಧಾರಣೆಯ ಕ್ರಮಗಳು: ಚುನಾವಣೆಗಳಲ್ಲಿ ದುಂದು ವೆಚ್ಚಕ್ಕೆ ಕಡಿವಾಣ ಹಾಕಬೇಕು. ಚುನಾವಣಾ ಪ್ರಚಾರ ಪ್ರಕ್ರಿಯೆಯನ್ನು ರಾಷ್ಟ್ರೀಕರಣ ಮಾಡಿ, ಅದರ ವೆಚ್ಚವನ್ನು ಇಳಿಸಿ, ಆ ವೆಚ್ಚವನ್ನು ಸರಕಾರವೇ, ಚುನಾವಣಾ ಆಯೋಗವೇ ಭರಿಸುವಂತೆ ಮಾಡಬೇಕು ಎಂದು ಅವರು ತಿಳಿಸಿದರು.
ಚುನಾವಣಾ ಪ್ರಚಾರ ಪುಸ್ತಿಕೆ, ಸರ್ವ ಪಕ್ಷಗಳಿಗೂ ಪ್ರಚಾರ ಸಭೆಗಳು, ಮಾಧ್ಯಮಗಳಲ್ಲಿ ಸಮಾನ ಅವಕಾಶ, ಸಾಮಾಜಿಕ ಜಲತಾಣಗಳ ಸದ್ಬಳಕೆ, ವಿಶೇಷ ಚುನಾವಣಾ ಕೋರ್ಟುಗಳ ರಚನೆ, ಮತ ಕ್ಷೇತ್ರದಲ್ಲಿ ಚುನಾವಣಾ ಅಭ್ಯರ್ಥಿಗಳ ಮಿತಿ, ಕಡ್ಡಾಯ ಮತದಾನ ವ್ಯವಸ್ಥೆ ಮಾಡಬೇಕು ಎಂದು ಅವರು ಹೇಳಿದರು.
ಒಂದು ರಾಷ್ಟ್ರ ಒಂದು ಚುನಾವಣೆಯ ಮೂಲಕ ಚುನಾವಣಾ ವೆಚ್ಚವನ್ನು ಕಡಿತಗೊಳಿಸಬೇಕು. ಶುದ್ಧ ಚಾರಿತ್ರ್ಯ ಇರುವ ಮತ್ತು ಕ್ರಿಮಿನಲ್ ಹಿನ್ನೆಲೆ ಇಲ್ಲದ ಸಾಮಾಜಿಕ ಕಾಳಜಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ರಾಜಕೀಯ ಪಕ್ಷಗಳು ಕಟ್ಟು ನಿಟ್ಟಾದ ಸ್ವಯಂ ಶಿಸ್ತಿನ ಮಾನದಂಡಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ತಿಳಿಸಿದರು.
ಎಲ್ಲ ರಾಜಕೀಯ ಪಕ್ಷಗಳು ‘ನನ್ನ ಮತ ಮಾರಾಟಕ್ಕಿಲ್ಲ’ ಎಂಬ ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಬೇಕು. ಎರಡು ಅಥವಾ ಮೂರು ಸಾರ್ವತ್ರಿಕ ಚುನಾವಣೆಗಳಲ್ಲಿ ಭಾಗವಹಿಸದೆ ಇರುವಂತಹ ಹಾಗೂ ನಿಗದಿತ ಸ್ಥಾನಗಳಿಸದ ರಾಜಕೀಯ ಪಕ್ಷಗಳನ್ನು ಅಮಾನ್ಯತೆಗೊಳಿಸಬೇಕು. ಎಲ್ಲ ಚುನಾವಣೆಗಳಿಗೆ ಅನ್ವಯವಾಗುವಂತಹ ಏಕ ಮತದಾರರ ಪಟ್ಟಿ ಪ್ರಕಟಿಸಲು ಕ್ರಮ ಕೈಗೊಳ್ಳಬೇಕು ಎಂದು ಸ್ಪೀಕರ್ ಹೇಳಿದರು.







