ಇಬ್ಬರು ಮಕ್ಕಳಿದ್ದರೆ ಮಾತ್ರ ಸರಕಾರಿ ಸೌಲಭ್ಯ ಕೊಡಿ: ಬಿಜೆಪಿ ಪರಿಷತ್ ಸದಸ್ಯೆ ಭಾರತಿ ಶೆಟ್ಟಿ

ಬೆಂಗಳೂರು, ಮಾ.28: ಸರಕಾರಿ ಸವಲತ್ತು ಮತ್ತು ಸಬ್ಸಿಡಿ ಸೌಲಭ್ಯ ಪಡೆಯಲು ಎರಡು ಮಕ್ಕಳ ಮಿತಿ ನೀತಿಯನ್ನು ಅಳವಡಿಸಿಕೊಳ್ಳಬೇಕು ಎಂದು ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ ಆಗ್ರಹಿಸಿದರು.
ಸೋಮವಾರ ವಿಧಾನ ಪರಿಷತ್ತಿನ ಕಲಾಪದಲ್ಲಿ ಪ್ರಸ್ತಾಪಿಸಿದ ಅವರು, ದೇಶ-ರಾಜ್ಯದಲ್ಲಿ ಜನಸಂಖ್ಯಾ ಸ್ಫೋಟವಾಗುತ್ತಿದೆ. ಇದರ ನಿಯಂತ್ರಣಕ್ಕೆ ಸಾಕಷ್ಟು ಪ್ರಯತ್ನಪಟ್ಟರೂ ಸಫಲ ಕಂಡಿಲ್ಲ. ಹೀಗಾಗಿ, ಸರಕಾರ ಕೊಡುತ್ತಿರುವ ಸವಲತ್ತು, ಸಬ್ಸಿಡಿ ಬಳಕೆಗೆ ಉತ್ತರಪ್ರದೇಶ ಮಾದರಿ ಅನುಸರಿಸಬೇಕು ಎಂದು ತಿಳಿಸಿದರು.
ಬರೀ ಎರಡು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸರಕಾರಿ ಸವಲತ್ತು ನೀಡುವ ಬಗ್ಗೆ ಪರಿಶೀಲಿಸಬೇಕು. ಈಗಾಗಲೇ ಉತ್ತರಪ್ರದೇಶದಲ್ಲಿ ಇಂತಹ ಪದ್ಧತಿ ಇರುವ ಕುರಿತು ಮಾಹಿತಿ ಇದೆ. ಇಲ್ಲಿಯೂ ಅಂತಹ ಪದ್ಧತಿ ಜಾರಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಭಾರತಿಶೆಟ್ಟಿ ಅವರ ಪ್ರಸ್ತಾಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಉತ್ತರ ಕೊಡಿಸುವುದಾಗಿ ಸರಕಾರದ ಪರವಾಗಿ ಸಚಿವ ಭೈರತಿ ಬಸವರಾಜು ವಿಶ್ವಾಸ ವ್ಯಕ್ತಪಡಿಸಿದರು.
Next Story





