ಇಮ್ರಾನ್‌ಖಾನ್ ಭವಿಷ್ಯ ಮಾರ್ಚ್ 31ರೊಳಗೆ ನಿರ್ಧಾರ: ಪಾಕ್ ಸಚಿವ ರಶೀದ್

ಇಸ್ಲಮಾಬಾದ್, ಮಾ.28: ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ಖಾನ್ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ ಫಲಿತಾಂಶ ಮಾರ್ಚ್ 31ರ ಒಳಗೆ ನಿರ್ಧಾರವಾಗಲಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಶೇಖ್ ರಶೀದ್ ಹೇಳಿದ್ದಾರೆ.
ಇಮ್ರಾನ್‌ಖಾನ್ ದೇಶದಿಂದ ಪಲಾಯನ ಮಾಡಲಿದ್ದಾರೆ ಎಂಬ ವರದಿ ಕೇವಲ ಊಹಾಪೋಹ ಅಷ್ಟೇ. ಅವರು ಎಲ್ಲಿಯೂ ಹೋಗುವುದಿಲ್ಲ. ಪ್ರಧಾನಿಯ ವಿರುದ್ಧದ ಅವಿಶ್ವಾಸ ನಿರ್ಣಯ ಉಪಕ್ರಮ ಪಾಕಿಸ್ತಾನವನ್ನು ದುರ್ಬಲಗೊಳಿಸುವ ಷಡ್ಯಂತ್ರವಾಗಿದೆ ಎಂದು ರಶೀದ್ ಹೇಳಿದ್ದಾರೆ. ದೇಶದಲ್ಲಿ ಮಧ್ಯಾವಧಿ ಚುನಾವಣೆ ನಡೆಸುವ, ಪಂಜಾಬ್ ಸಂಸತ್ತನ್ನು ವಿಸರ್ಜಿಸುವ ಮತ್ತು ಸಿಂಧ್ ಪ್ರಾಂತದಲ್ಲಿ ರಾಜ್ಯಪಾಲರ ಆಳ್ವಿಕೆ ಜಾರಿಗೊಳಿಸುವ ಪ್ರಸ್ತಾವನೆಯನ್ನು ಇಮ್ರಾನ್ ತಳ್ಳಿಹಾಕಿದ್ದಾರೆ ಎಂದ ರಶೀದ್, ಪಾಕಿಸ್ತಾನದ ಮುಸ್ಲಿಂಲೀಗ್-ನವಾರ್ ಪಕ್ಷಕ್ಕೆ ಇಸ್ಲಮಾಬಾದ್‌ನಲ್ಲಿ ಸೋಮವಾರ ರ್ಯಾಲಿ ನಡೆಸಲು ಅನುಮತಿ ನೀಡಲಾಗಿದೆ ಎಂದರು.
ಇಮ್ರಾನ್ ಅವರ ರಾಜಕೀಯ ಇನ್ನಿಂಗ್ಸ್ ಅಪಾಯದ ಅಂಚಿನಲ್ಲಿದೆ ಎಂಬ ಕಲ್ಪನೆಯನ್ನು ಜನತೆ ದೂರವಿಡಬೇಕು. ರವಿವಾರ ಅವರು ಇಸ್ಲಮಾಬಾದಿನಲ್ಲಿ ನಡೆಸಿದ ಮಹಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಜನಸ್ತೋಮವು ಅವರಿಗೆ ಇರುವ ಜನಬೆಂಬಲದ ನಿದರ್ಶನವಾಗಿದೆ ಎಂದು ರಶೀದ್ ಹೇಳಿದರು. ಈ ರ್ಯಾಲಿಯಲ್ಲಿ ಮಾತನಾಡಿದ್ದ ಇಮ್ರಾನ್‌ಖಾನ್, ತನ್ನ ಸರಕಾರವನ್ನು ಪದಚ್ಯುತಗೊಳಿಸಲು ಅಂತರಾಷ್ಟ್ರೀಯ ಮಟ್ಟದ ಪಿತೂರಿ ನಡೆದಿದೆ ಎಂದಿದ್ದರು. ವಿದೇಶದ ಶಕ್ತಿಗಳು ಸ್ಥಳೀಯ ರಾಜಕಾರಣಿಗಳು ಹಾಗೂ ಹಣವನ್ನು ಬಳಸಿಕೊಂಡು ದೇಶದ ವಿದೇಶ ನೀತಿಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿವೆ. ಈ ಬಗ್ಗೆ ತನ್ನಲ್ಲಿ ದಾಖಲೆಯಿದೆ ಎಂದಿದ್ದರು.
ಸೋಮವಾರ ಪಾಕಿಸ್ತಾನ ಸಂಸತ್‌ನ ಮಹತ್ವದ ಅಧಿವೇಶನ ಆರಂಭವಾಗಿದ್ದು ಪ್ರಧಾನಿ ಇಮ್ರಾನ್‌ಖಾನ್ ವಿರುದ್ಧದ ಅವಿಶ್ವಾಸ ನಿರ್ಣಯವನ್ನು ಪ್ರತಿಪಕ್ಷಗಳು ಅಧಿಕೃತವಾಗಿ ಮಂಡಿಸುವ ನಿರೀಕ್ಷೆಯಿದೆ. 342 ಸದಸ್ಯಬಲದ ಸಂಸತ್ತಿನಲ್ಲಿ ಪ್ರಧಾನಿಯ ಪದಚ್ಯುತಿಗೆ ಅಗತ್ಯವಾದ 172 ಸದಸ್ಯರ ಬೆಂಬಲ ತಮಗಿದೆ ಎಂದು ವಿಪಕ್ಷಗಳು ಪ್ರತಿಪಾದಿಸಿವೆ.
ಶಹಬಾರ್ ಶರೀಫ್ ನೂತನ ಪ್ರಧಾನಿ ?
ಈ ಮಧ್ಯೆ, ಇಮ್ರಾನ್‌ಖಾನ್ ಅವರ ಪಕ್ಷ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್(ಪಿಟಿಐ) ಪಕ್ಷ, ಪಾಕಿಸ್ತಾನ್ ಮುಸ್ಲಿಂ ಲೀಗ್-ಕಾಯದ್(ಪಿಎಂಎಲ್-ಕ್ಯು) ಪಕ್ಷಗಳು ವಿರೋಧ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾರ್(ಪಿಎಂಎಲ್-ಎನ್) ಜತೆ ಒಪ್ಪಂದ ಮಾಡಿಕೊಂಡಿದ್ದು ಇದರಂತೆ ಪಿಎಂಎಲ್-ಎನ್ ಅಧ್ಯಕ್ಷ ಶಹಬಾರ್ ಶರೀಫ್ ಪಾಕಿಸ್ತಾನದ ನೂತನ ಪ್ರಧಾನಿಯಾಗಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್-ನ್ಯೂಸ್ 18 ವರದಿ ಮಾಡಿದೆ.
ಪಾಕ್ ಪ್ರಧಾನಿ ಇಮ್ರಾನ್‌ಖಾನ್ ಈ ವಾರದೊಳಗೆ ಹುದ್ದೆಯಿಂದ ನಿರ್ಗಮಿಸುವುದು ಖಚಿತವಾಗಿದೆ. ಪಾಕಿಸ್ತಾನದ ಹಾಲಿ ಅಧ್ಯಕ್ಷ ಆರಿಫ್ ಆಲ್ವಿ ಕೂಡಾ ಪದಚ್ಯುತಗೊಳ್ಳಲಿದ್ದು ಈ ಸ್ಥಾನಕ್ಕೆ ಧರ್ಮಗುರು ಮತ್ತು ಜಮೀಯತ್ ಉಲೆಮಾ-ಇ-ಇಸ್ಲಾಮ್(ಜೆಯುಐ)ನ ಅಧ್ಯಕ್ಷ ಮೌಲಾನಾ ಫಝಲುರ್ರಹ್ಮಾನ್ ನೇಮಕವಾಗಲಿದ್ದಾರೆ. ಸಂಸತ್‌ನ ಅಧ್ಯಕ್ಷರ ಸ್ಥಾನಕ್ಕೆ ಮಾಜಿ ಪ್ರಧಾನಿ, ಪಾಕಿಸ್ತಾನ್ ಪೀಪಲ್ಸ್ ಪಕ್ಷದ ಮುಖಂಡ ಯೂಸುಫ್ ರಝಾ ಗಿಲಾನಿ ನೇಮಕಗೊಳ್ಳುವ ನಿರೀಕ್ಷೆಯಿದೆ . ಅಲ್ಲದೆ ಸೋಮವಾರದ ಅಧಿವೇಶನದಲ್ಲಿ ಪಂಜಾಬ್ ಪ್ರಾಂತದ ಮುಖ್ಯಮಂತ್ರಿ ಉಸ್ಮಾನ್ ಬುಝ್ದಾರ್ ವಿರುದ್ಧವೂ ಅವಿಶ್ವಾಸ ನಿರ್ಣಯ ಮಂಡನೆಯಾಗಿದ್ದು ಅವರ ಸ್ಥಾನದಲ್ಲಿ ಈಗ ಅಲ್ಲಿನ ವಿಧಾನಸಭೆಯ ಸ್ಪೀಕರ್ ಆಗಿರುವ ಚೌಧರಿ ಪರ್ವೇಝ್ ಇಲಾಹಿ ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.







