ನ್ಯಾಟೊ ಸದಸ್ಯತ್ವದ ಬಗ್ಗೆ ಜನಾಭಿಪ್ರಾಯ ಸಂಗ್ರಹಕ್ಕೆ ಸಿದ್ಧ: ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಘೋಷಣೆ

Photo: Twitter/@rutaagayire
ಕೀವ್, ಮಾ.28: ಸಂಧಾನ ಮಾತುಕತೆ ಶೀಘ್ರ ಪುನರಾರಂಭಗೊಂಡು ಶಾಂತಿ ಸ್ಥಾಪನೆಯಾಗಬೇಕು ಎಂಬುದು ನಮ್ಮ ಆಶಯವಾಗಿದೆ. ತಟಸ್ಥ ನೀತಿ ಅನುಸರಿಣೆ ಮತ್ತು ರಶ್ಯಕ್ಕೆ ಭದ್ರತೆಯ ಖಾತರಿಗಳನ್ನು ನೀಡಲೂ ನಾವು ಸಿದ್ಧ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮೀರ್ ಝೆಲೆನ್ಸ್ಕಿ ಹೇಳಿದ್ದಾರೆ.
ಆದರೆ ರಶ್ಯ ಅಧ್ಯಕ್ಷ ಪುಟಿನ್ ಜತೆಗಿನ ಮುಖಾಮುಖಿ ಮಾತುಕತೆಯಿಂದ ಮಾತ್ರ ಯುದ್ಧ ಅಂತ್ಯಗೊಳ್ಳಲು ಸಾಧ್ಯ ಎಂದೂ ಅವರು ಇದೇ ವೇಳೆ ಪ್ರತಿಪಾದಿಸಿದ್ದಾರೆ. ಆದರೆ ನಮ್ಮ ಸಾರ್ವಭೌಮತೆಯ ರಕ್ಷಣೆ ಮತ್ತು ಇದರಲ್ಲಿ ರಶ್ಯದ ಹಸ್ತಕ್ಷೇಪ ತಡೆಯುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಭದ್ರತೆಯ ಖಾತರಿ, ತಟಸ್ಥತೆ ಮತ್ತು ಪರಮಾಣು ರಹಿತ ದೇಶವಾಗಿರುವ ನಮ್ಮ ಸ್ಥಾನಮಾನ-ಇದಕ್ಕೆ ನಾವು ಸಿದ್ಧವಿದ್ದೇವೆ ಎಂದು ರಶ್ಯದ ಮಾಧ್ಯಮ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟಪಡಿಸಿದ್ದಾರೆ.
ನ್ಯಾಟೊದ ಸದಸ್ಯತ್ವ ಪಡೆಯುವ ಉಕ್ರೇನ್ನ ನಿರ್ಧಾರ ತನ್ನ ಪ್ರಾದೇಶಿಕ ಭದ್ರತೆಗೆ ಅಪಾಯವಾಗಿದೆ ಎಂದು ಈ ಹಿಂದಿನಿಂದಲೂ ಪ್ರತಿಪಾದಿಸುತ್ತಿರುವ ರಶ್ಯ, ನ್ಯಾಟೊ ಸದಸ್ಯತ್ವ ಪಡೆಯುವ ತನ್ನ ಇರಾದೆಯನ್ನು ಉಕ್ರೇನ್ ಕೈಬಿಡಬೇಕೆಂದು ಆಗ್ರಹಿಸುತ್ತಿದೆ. ಉಕ್ರೇನ್ ಮೇಲಿನ ಆಕ್ರಮಣಕ್ಕೂ ಈ ವಿಷಯ ಮೂಲ ಕಾರಣ ಎಂದು ರಶ್ಯ ಅಧ್ಯಕ್ಷ ಪುಟಿನ್ ಹೇಳಿದ್ದರು. ಇದೀಗ ಈ ಬಗ್ಗೆ ಹೇಳಿಕೆ ನೀಡಿರುವ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ, ಸದ್ಯಕ್ಕೆ ತಮ್ಮ ದೇಶ ತಟಸ್ಥ ನೀತಿ ತಳೆಯಲಿದೆ. ರಶ್ಯ ತನ್ನ ಸೇನೆಯನ್ನು ಹಿಂಪಡೆದ ಬಳಿಕ ಈ ಬಗ್ಗೆ ಜನಾಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದಿದ್ದಾರೆ.
ರಶ್ಯದ ಅಧ್ಯಕ್ಷರೊಂದಿಗೆ ನಾವೊಂದು ಒಪ್ಪಂದಕ್ಕೆ ಬರಬೇಕಿದೆ. ಈ ಒಪ್ಪಂದ ಸಾಧ್ಯವಾಗಬೇಕಿದ್ದರೆ ಅವರು ತಮ್ಮ ಪಡೆಯನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಮತ್ತು ನನ್ನೊಂದಿಗೆ ಮುಖಾಮುಖಿ ಮಾತುಕತೆ ನಡೆಸಬೇಕು ಎಂದವರು ಹೇಳಿದ್ದಾರೆ. ಈ ಸಂದರ್ಶನವನ್ನು ರಶ್ಯದ ಮಾಧ್ಯಮಗಳು ಪ್ರಸಾರ ಮಾಡದಂತೆ ರಶ್ಯ ಸರಕಾರ ನಿಷೇಧಿಸಿದೆ.
ಈ ಮಧ್ಯೆ, ಉಕ್ರೇನ್-ರಶ್ಯ ನಡುವಿನ ಮುಂದಿನ ಸಂಧಾನ ಸಭೆ ಟರ್ಕಿಯ ಇಸ್ತಾನ್ಬುಲ್ನಲ್ಲಿ ಮಂಗಳವಾರದಿಂದ ಆರಂಭವಾಗುವ ನಿರೀಕ್ಷೆಯಿದೆ . ಈ ಕುರಿತು ಉಭಯ ಮುಖಂಡರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇನೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ಎರ್ಡೋಗನ್ ಹೇಳಿದ್ದಾರೆ.







