ಐಪಿಎಲ್: ಲಕ್ನೊ ಸೂಪರ್ ಜೈಂಟ್ಸ್ ವಿರುದ್ಧ ಗುಜರಾತ್ ಜಯಭೇರಿ

ಮುಂಬೈ, ಮಾ.28: ಕುತೂಹಲಕಾರಿಯಾಗಿ ನಡೆದ ಐಪಿಎಲ್‌ನ 4ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಲಕ್ನೊ ಸೂಪರ್ ಜೈಂಟ್ಸ್ ತಂಡವನ್ನು 5 ವಿಕೆಟ್ ಗಳ ಅಂತರದಿಂದ ಸೋಲಿಸಿದೆ. ಈ ಮೂಲಕ ತನ್ನ ಮೊದಲ ಐಪಿಎಲ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ವಾಂಖೆಡೆ ಸ್ಟೇಡಿಯಂನಲ್ಲಿ ಗೆಲ್ಲಲು 159 ರನ್ ಗುರಿ ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ 19.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 161 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಗುಜರಾತ್ ಆರಂಭಿಕ ಬ್ಯಾಟರ್ ಶುಭಮನ್ ಗಿಲ್(0), ವಿಜಯ ಶಂಕರ್(4) ವಿಕೆಟನ್ನು ಬೇಗನೆ ಕಳೆದುಕೊಂಡಿತು. ಮ್ಯಾಥ್ಯೂ ವೇಡ್(30 ರನ್) ಹಾಗೂ ನಾಯಕ ಹಾರ್ದಿಕ್ ಪಾಂಡ್ಯ(33 ರನ್)3ನೇ ವಿಕೆಟಿಗೆ 57 ರನ್ ಸೇರಿಸಿ ಒಂದಷ್ಟು ಹೋರಾಟ ನೀಡಿದರು. ಗುಜರಾತ್ 78 ರನ್‌ಗೆ 4 ವಿಕೆಟ್‌ಗಳನ್ನು ಕಳೆದುಕೊಂಡಿತು. ಆಗ ಜೊತೆಯಾದ ರಾಹುಲ್ ಟೆವಾಟಿಯಾ(ಔಟಾಗದೆ 40, 24 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್(30 ರನ್,21 ಎಸೆತ)5ನೇ ವಿಕೆಟ್‌ಗೆ 60 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು. ಮಿಲ್ಲರ್ ಔಟಾದ ಬಳಿಕ ರಾಹುಲ್ ಹಾಗೂ ಅಭಿನವ್ ಮನೋಹರ್(ಔಟಾಗದೆ 15) ಗೆಲುವಿನ ವಿಧಿ ವಿಧಾನ ಪೂರೈಸಿದರು.
ಇದಕ್ಕೂ ಮೊದಲು ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಲಕ್ನೊ ಆಲ್‌ರೌಂಡರ್‌ಗಳಾದ ದೀಪಕ್ ಹೂಡ ಹಾಗೂ ಆಯುಷ್ ಬದೋನಿ ಗಳಿಸಿದ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ ವಿರುದ್ಧ 6 ವಿಕೆಟ್ ನಷ್ಟಕ್ಕೆ 158 ರನ್ ಕಲೆ ಹಾಕಿದೆ.





