ಬಂಡಾಯವೆಂಬುದು ಮಾನವೀಯ ಸ್ಪಂದನವೇ ಹೊರತು ಅಪಾಯಕಾರಿ ಅಲ್ಲ: ಡಾ.ರಾಜಪ್ಪ ದಳವಾಯಿ
ಚಿಕ್ಕಮಗಳೂರು, ಮಾ.28:ಬಂಡಾಯವೆಂದರೆ ಮಾನವೀಯತೆಗೆ ತುಡಿಯುವ ಒಂದು ಆದ್ರ್ರತೆ. ಅದು ಸ್ಥಾವರಗೊಂಡ ಭಾವನಾ ಜಗತ್ತಿನಲ್ಲಿ ಪ್ರತಿರೋಧವೆಂಬ ಮನುಷ್ಯ ಪರ ಕಾಳಜಿಯಾಗಿದೆ. ಜಾತಿ, ಮತ, ಪ್ರಾದೇಶಿಕ ಭೇಧಗಳಿಲ್ಲದೆ ಕನ್ನಡವನ್ನು ಕಟ್ಟುವ ಕೆಲಸವಾಗಿದೆ. ಆದ್ದರಿಂದ ಬಂಡಾಯವೆಂಬುದು ಮಾನವೀಯ ಸ್ಪಂದನವೇ ಹೊರತು ಅಪಾಯಕಾರಿ ಅಲ್ಲ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಚ ಹಾಗೂ ಬೆಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಹಾಗೂ ಸಾಹಿತಿ ಡಾ.ರಾಜಪ್ಪ ದಳವಾಯಿ ಅಭಿಪ್ರಾಯಿಸಿದರು.
ಜಿಲ್ಲೆಯ ಅಜ್ಜಂಪುರದ ಪಟ್ಟಣದ ಗುರು ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ನಡೆದ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯ ನಮಗೆ ಮನುಷ್ಯತ್ವ ಕಲಿಸುತ್ತದೆ. ಇರುವ ಬದುಕಿನಲ್ಲಿ ಕಿಂಚಿತ್ತಾದರೂ ನಮ್ಮ ಜ್ಞಾನ ಮನುಷ್ಯನ ಬಗೆಗೆ ಯೋಚಿಸಬೇಕು. ಇಂದಿನ ಬದುಕು ಮನುಷ್ಯನನ್ನು ಬಿಟ್ಟು ಯೋಚಿಸುತ್ತಿದ್ದು, ಪಾಶ್ಚಾತ್ಯ ಸಾಹಿತ್ಯ ಮನುಷ್ಯ ಕೇಂದ್ರಿತವಾಗಿ ಯೋಚಿಸುತ್ತದೆ. ಆದ್ದರಿಂದ ನಾವು ಜಗತ್ತಿನಲ್ಲಿ ಒಳ್ಳೆಯದನ್ನು ಓದಲು ಅವಕಾಶ ಮಾಡಿಕೊಂಡು, ಆ ಮೂಲಕ ನಮ್ಮ ಮನಸ್ಸನ್ನು ಪರಿವರ್ತನೆ ಮಾಡಿಕೊಳ್ಳಬೇಕು. ಸಾಹಿತ್ಯಾದಿ ಕಲೆಗಳು ಸಮಾಜಕ್ಕೆ ಒಳ್ಳೆಯದನ್ನೆ ನೀಡುತ್ತದೆ ಎಂದರು.
ಕನ್ನಡ ಸಾಹಿತ್ಯಕ್ಕೂ ಸಂವಿಧಾನಕ್ಕೂ ಸಂಬಂಧವಿದ್ದು, ಕವಿರಾಜ ಮಾರ್ಗದಲ್ಲಿ ಒಂದು ಸಾಲಿನಲ್ಲಿ ಅನ್ಯ ಧರ್ಮವನ್ನು, ವಿಚಾರವನ್ನು ಸಹಿಸುವುದೇ ನಿಜವಾದ ಸಂಪತ್ತು ಎಂದು ಹೇಳಲಾಗಿದೆ. ಇದೇ ವಿಚಾರ ಸಂವಿಧಾನದಲ್ಲೂ ಮುಖ್ಯವಾದ ಆಶಯವಾಗಿದೆ. ನನ್ನ ಜಾತಿಗಿಂತ ನನ್ನ ಧರ್ಮಕ್ಕಿಂತ ಇಂದು ಸಂವಿಧಾನ ದೊಡ್ಡದು. ಅದನ್ನು ನಾವು ರಕ್ಷಿಸಿದರೆ ನಮ್ಮನ್ನು ಅದು ರಕ್ಷಿಸುತ್ತದೆ ಎಂದ ಅವರು, ಅಜ್ಜಂಪುರ ಕಲೆಗಳ ತವರಾಗಿದ್ದು, ಕಲಾಕೇಂದ್ರ ಇಲ್ಲಿಯ ಜೀವಾಳವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಸಾಂಸ್ಕøತಿಕ ಚಟುವಟಿಕೆಗಳ ಕೇಂದ್ರವಾಗಿದೆ. ಅಜ್ಜಂಪುರದಲ್ಲಿ ಕರ್ನಾಟಕ ರಂಗಾಯಣದ ಒಂದು ಶಾಖೆಯನ್ನು ಇಲ್ಲಿ ನೆಲೆಗೊಳಿಸಿದರೆ ಚಿಕ್ಕಮಗಳೂರು ಜಿಲ್ಲೆಯ ರಂಗಕಲೆಗಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಗೊ.ರು.ಚನ್ನಬಸಪ್ಪ, 1915ರಲ್ಲಿ ಸ್ಥಾಪನೆಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಇಂದು 3.5 ಲಕ್ಷ ಸದಸ್ಯರನ್ನು ಹೊಂದಿರುವ ಜಗತ್ತಿನ ಏಕೈಕ ಸಾಹಿತ್ಯ ಸಂಸ್ಥೆಯಾಗಿದೆ. ತನ್ನ ಗಾತ್ರ ಹಾಗೂ ಪಾತ್ರವನ್ನು ಹೆಚ್ಚಿಸಿಕೊಂಡಿರುವ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯಾಗಿದೆ ಎಂದ ಅವರು, ಪರಿಷತ್ತು ತನ್ನ ಸದಸ್ಯರ ಸಂಖ್ಯೆಯನ್ನು 1 ಕೋಟಿ ಮಾಡಲು ಹೊರಟಿದೆ ಎಂಬುದು ಕೇಳಿ ಬರುತ್ತಿದ್ದು, ಈ ಸಾಹಿತ್ಯ ಸಂಸ್ಥೆಗೆ ಯಾವುದೇ ಚಳುವಳಿಯ ಅಗತ್ಯವಿಲ್ಲ ಹಾಗೂ ಪರಿಷತ್ತು ರಾಜಕೀಯ ಅಥವಾ ಜನಾಂಗೀಯ ಸಂಸ್ಥೆಯಲ್ಲ. ಆದ್ದರಿಂದ ಯಾರಿಗೆ ಸಾಹಿತ್ಯದ ಮೇಲೆ ಒಲವು ಹಾಗೂ ಆಸಕ್ತಿ ಇದೆ ಅವರು ಪರಿಷತ್ತಿನ ಸದಸ್ಯರಾದರೆ ಸಾಕು ಎಂದು ಅವರು ಅಭಿಪ್ರಾಯಪಟ್ಟರು.
ಜಾಗತೀಕರಣ ಹಾಗೂ ರಾಜಕೀಯ ಅಬ್ಬರದ ನಡುವೆ ಮನುಷ್ಯನ ನೈತಿಕ ಮಟ್ಟ ಕುಸಿದಿದೆ. ಜನರ ವೈಚಾರಿಕ ಚಿಂತನೆಗೆ ಕ್ಷಯ ರೋಗ ತಗುಲಿದ್ದು, ಮಾನವ ಸಂಬಂಧಗಳು ಹದಗೆಟ್ಟಿವೆ. ಇದಕ್ಕೆ ಸಾಹಿತ್ಯವು ಪರಿಣಾಮಕಾರಿ ಮಾಧ್ಯಮವಾಗಿದ್ದು, ಸಾಹಿತ್ಯ ಸಮ್ಮೇಳನಗಳು ಜನರಲ್ಲಿ ಆತ್ಮಪ್ರಜ್ಞೆ ಹಾಗೂ ವೈಚಾರಿಕ ಜಾಗೃತಿಯನ್ನು ಮೂಡಿಸಬೇಕು ಎಂದರು.
ಸಮೇಳನದಲ್ಲಿ ಉಪಸ್ಥಿತರಿದ್ದ ಸಾಣೆಹಳ್ಳಿ ತರಳಬಾಳು ಶಾಖಾಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಯಾವ ವ್ಯಕ್ತಿ ಕೇವಲ ಹೊಟ್ಟೆಯ ಹಸಿವನ್ನು ನಿವಾರಿಸಿಕೊಂಡು ನೆತ್ತಿಯ ಬೌದ್ಧಿಕ ಹಸಿವನ್ನು ಮರೆಯುವನೋ, ಆ ವ್ಯಕ್ತಿ ಅತಿ ಬೇಗ ನಾಶ ಹೊಂದುತ್ತಾನೆ. ಜಗತ್ತು ಬದಲಾವಣೆ ಆಗಬೇಕೆಂಬುದು ಮುಖ್ಯವಲ್ಲ, ನಾವು ಬದಲಾವಣೆಯಾಗಬೇಕು. ವ್ಯಕ್ತಿ ಬದಲಾವಣೆಯಾದರೆ ಜಗತ್ತು ಖಂಡಿತ ಬದಲಾಗುತ್ತದೆ. ಇಂದಿನ ಸಮ್ಮೇಳನಗಳು ಜಾತ್ರೆಯಾಗಿವೆ, ಆದರೆ ಆ ಜಾತ್ರೆಗಳು ಬೆಂಡು, ಬತ್ತಾಸಿನ ಜಾತ್ರೆಯಾಗದೇ ಪುಸ್ತಕದ ಜಾತ್ರೆಯಾಗಬೇಕು ಎಂದರು.
ಸಮ್ಮೇಳನದಲ್ಲಿ ರವಿ ದಳವಾಯಿಯವರ ಮೊದಲ ಮಳೆ, ಗೀತಾ ಅನುವನಹಳ್ಳಿ ಬರೆದ ಹೆಸರಿಲ್ಲದ ಹಕ್ಕಿಗಳು, ಕಡ್ಲಪ್ಪರ ಬಸಪ್ಪರ ಹೊರಮಠದ ಅಡವಿಸಿದ್ದೇಶ್ವರನ ಮಾಹಿಮೃತ ಹಾಗೂ ಅಪೂರ್ವ ಅಜ್ಜಂಪುರ ಬರೆದ ಕಥಾಗುಚ್ಚ ಮತ್ತು ಕವನ ಸಂಕಲನಗಳ ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್, ಸ್ವಾಗತ ಸಮಿತಿ ಅಧ್ಯಕ್ಷ ಎ.ಸಿ.ಚಂದ್ರಪ್ಪ, ತರೀಕೆರೆ ಮಾಜಿ ಶಾಸಕ ಎಸ್.ಎಂ ನಾಗರಾಜ್, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತು ಪ್ರಧಾನ ಕಾರ್ಯದರ್ಶಿ ನೇ.ಭ.ರಾಮಲಿಂಗಶೆಟ್ಟಿ, ಬೆಂಗಳೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಪ್ರಾಧ್ಯಾಪಕ ಡಾ.ನಟರಾಜ್ ಹುಳಿಯಾರ್, ಕನ್ನಡ ಜಾನಪದ ಪರಿಷತ್ತಿನ ಅಧ್ಯಕ್ಷ ಡಾ.ಎಸ್.ಬಾಲಾಜಿ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.







