ಒಡಿಶಾ: ಇತಿಹಾಸ ಸೃಷ್ಟಿಸಿದ ಗುಲ್ಮಕಿ ದಲೌಝಿ ಹಬೀಬ್
ಪಾಲಿಕೆ ಅಧ್ಯಕ್ಷೆಯಾದ ರಾಜ್ಯದ ಪ್ರಪ್ರಥಮ ಮುಸ್ಲಿಂ ಮಹಿಳೆ

ಗುಲ್ಮಕಿ ದಲೌಝಿ ಹಬೀಬ್
ಭದ್ರಕ್ (ಒಡಿಶಾ): ಮೂವತ್ತೊಂಬತ್ತು ವರ್ಷ ವಯಸ್ಸಿನ ಈ ಮಹಿಳೆ ಹಲವು ಸಾಮಾಜಿಕ ಹಾಗೂ ರಾಜಕೀಯ ಕಟ್ಟುಪಾಡುಗಳನ್ನು ಪುಡಿಗಟ್ಟಿದ್ದಾರೆ. ಭದ್ರಕ್ ಪಾಲಿಕೆ ಅಧ್ಯಕ್ಷ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದ ಪುರಾನಾ ಬಜಾರ್ ಪ್ರದೇಶದ ಗುಲ್ಮಕಿ ದಲೌಝಿ ಹಬೀಬ್, ಪ್ರಮುಖ ಪಕ್ಷಗಳಾದ ಬಿಜೆಡಿ, ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಇತಿಹಾಸ ಸೃಷ್ಟಿಸಿದ್ದಾರೆ.
ಒಡಿಶಾ ಇತಿಹಾಸದಲ್ಲೇ, ಮುಸ್ಲಿಂ ಮಹಿಳೆ ಪಾಲಿಕೆ ಮುಖ್ಯಸ್ಥೆಯಾಗಿ ಆಯ್ಕೆಯಾದ ನಿದರ್ಶನ ಇಲ್ಲ. ಆದರೆ ಎರಡು ದಿನಗಳ ಹಿಂದೆ ಭದ್ರಕ್ ಪಟ್ಟಣದ ಅಧ್ಯಕ್ಷೆಯಾಗಿ ಇವರು ಆಯ್ಕೆಯಾಗುವ ಮೂಲಕ ಹೊಸ ಇತಿಹಾಸ ಸೃಷ್ಟಿಯಾಗಿದೆ.
ಗುಲ್ಮಕಿ ದಲೌಝಿ ಹಬೀಬ್ ಅವರು ಚುನಾವಣೆಯಲ್ಲಿ ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಡಿಯ ಸಮಿತಾ ಮಿಶ್ರಾ ವಿರುದ್ಧ 3256 ಮತಗಳ ಅಂತರದ ಜಯ ಸಾಧಿಸಿದ್ದಾರೆ. ಗುಲ್ಮಕಿ ಹಬೀಬ್ 28115 ಮತಗಳನ್ನು ಪಡೆದರೆ, ಸಮಿತಾ 24,859 ಮತ ಪಡೆದು ಸೋಲೊಪ್ಪಿಕೊಂಡರು. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕ್ರಮವಾಗಿ 6787 ಮತ್ತು 1977 ಮತಗಳನ್ನಷ್ಟೇ ಪಡೆದರು.
ಕೋಮುಸೂಕ್ಷ್ಮ ಪಟ್ಟಣವಾದ ಭದ್ರಕ್ನಲ್ಲಿ ಗುಲ್ಮಕಿ ಹಬೀಬ್ ಅವರ ಗೆಲುವು ತೀರಾ ಅನಿರೀಕ್ಷಿತ. ಈ ಹಿಂದೆ ಪಾಲಿಕೆಗೆ ಅಲ್ಪಸಂಖ್ಯಾತ ಸಮುದಾಯದ ಕೌನ್ಸಿಲರ್ಗಳು ಆದ್ದರೂ, ಪಾಲಿಕೆಗೆ ಮುಸ್ಲಿಂ ಮಹಿಳೆಯೊಬ್ಬರು ಅಧ್ಯಕ್ಷೆಯಾದ ನಿದರ್ಶನ ಇಲ್ಲ. ಹಿಂದೂ ಬಾಹುಳ್ಯದ ಈ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆ ಗೆಲುವು ಪಡೆದಿರುವುದು ರಾಜಕೀಯ ಪಂಡಿತರ ಲೆಕ್ಕಾಚಾರ ಬುಡಮೇಲು ಮಾಡಿದೆ.
"ಪಾಲಿಕೆಯ ಅಧ್ಯಕ್ಷ ಹುದ್ದೆಗೆ ಆಯ್ಕೆಯಾಗಿರುವ ಪ್ರಥಮ ಮುಸ್ಲಿಂ ಮಹಿಳೆ ಎನ್ನುವುದು ಹೆಮ್ಮೆಯ ಸಂಗತಿ. ಇಡೀ ಭದ್ರಕ್ ಪಟ್ಟಣ ನನ್ನ ಗೆಲುವನ್ನು ಸಂಭ್ರಮಿಸುತ್ತಿದೆ. ಜನ ನನಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಪಟ್ಟಣದ ಹಿಂದೂ ಮತ್ತು ಮುಸ್ಲಿಂ ಬಂಧುಗಳಿಗೆ ನನ್ನ ಗೆಲುವನ್ನು ಸಮರ್ಪಿಸುತ್ತಿದ್ದೇನೆ" ಎಂದು ಅವರು ನುಡಿದರು.
ಭದ್ರಕ್ ಪಾಲಿಕೆಯ 30 ವಾರ್ಡ್ಗಳಲ್ಲಿ 12ರಲ್ಲಿ ಮುಸ್ಲಿಂ ಬಾಹುಳ್ಯವಿದೆ. ಎರಡು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರು ದೊಡ್ಡ ಸಂಖ್ಯೆಯಲ್ಲಿ ದ್ದಾರೆ. ಭದ್ರಕ್ ಪಟ್ಟಣದ 87 ಸಾವಿರ ಮತದಾರರ ಪೈಕಿ 34 ಸಾವಿರ ಮಂದಿ ಮುಸ್ಲಿಮರು.
ಸಾಮಾನ್ಯ ಗ್ರಹಿಕೆಗೆ ವಿರುದ್ಧವಾಗಿ ಹಿಂದೂಗಳ ಮನಸ್ಸಿನಲ್ಲಿ ಮುಸ್ಲಿಂ ಅಭ್ಯರ್ಥಿ ಬಗ್ಗೆ ಯಾವ ವಿರೋಧವೂ ಇರಲಿಲ್ಲ. "ಪ್ರಚಾರದ ವೇಳೆ ನನ್ನನ್ನು ತಮ್ಮದೇ ಜನರಂತೆ ಉಪಚರಿಸಿದರು. ಚುನಾವಣೆ ಸಂದರ್ಭದಲ್ಲಿ ಕೆಲವರು ಹರಡುವಂತೆ ಯಾವ ದ್ವೇಷ ಭಾವನೆಯೂ ಹಿಂದೂ ಮತ್ತು ಮುಸ್ಲಿಮರ ನಡುವೆ ಇಲ್ಲ. ಧರ್ಮವನ್ನು ಮೀರಿ ಜನ ನನಗೆ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಾರೆ" ಎಂದು ಹೇಳಿದ್ದಾರೆ. ಗುಲ್ಮಕಿ ಹಬೀಬ್ ಅವರ ಪತಿ ಶೇಖ್ ಝಹೀದ್ ಹಬೀಬ್ ಬಿಜೆಡಿ ಯುವ ಘಟಕದ ಮಾಜಿ ಜಿಲ್ಲಾ ಉಪಾಧ್ಯಕ್ಷರಾಗಿದ್ದರು.