'ಕಾಶ್ಮೀರ ಫೈಲ್ಸ್'ಗೆ ಟಿಕೆಟ್ ವಿತರಿಸಿದಂತೆ ಪೆಟ್ರೋಲ್, ಡೀಸೆಲ್ ಗೆ ಬಿಜೆಪಿ ಕೂಪನ್ ವಿತರಿಸಲಿ: ರಾಜಸ್ಥಾನ ಸಚಿವ

Photo:Facebook/khachariyawasofficial
ಜೈಪುರ: ಕಳೆದ ಒಂದು ವಾರದಿಂದ ಪೆಟ್ರೋಲ್ ಹಾಗೂ ಡೀಸೆಲ್ ಎರಡರ ಬೆಲೆ ಲೀಟರ್ಗೆ ಸುಮಾರು 5 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಕೇಂದ್ರದ ಆಡಳಿತಾರೂಢ ಬಿಜೆಪಿಯ ಮಂತ್ರಿಗಳು ‘’ಕಾಶ್ಮೀರ ಫೈಲ್ಸ್' ಚಲನಚಿತ್ರದ ಟಿಕೆಟ್ಗಳನ್ನು ವಿತರಿಸಿದ ರೀತಿಯಲ್ಲಿ ಪೆಟ್ರೋಲ್, ಡೀಸೆಲ್, ಎಲ್ ಪಿಜಿ ಗಾಗಿ ಕೂಪನ್ಗಳನ್ನು ವಿತರಿಸಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಖಚರಿಯಾವಾಸ್ ಸೋಮವಾರ ಸಲಹೆ ನೀಡಿದ್ದಾರೆ.
ಚುನಾವಣೆಯ ನಂತರ ಬಿಜೆಪಿಯು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಬಿಜೆಪಿ ನಾಯಕರು ರಾವಣನ ನೀತಿಯನ್ನು ಪಾಲಿಸುತ್ತಿದ್ದಾರೆಯೇ ಹೊರತು ಭಗವಾನ್ ರಾಮನ ನೀತಿಯನ್ನಲ್ಲ. ಬಿಜೆಪಿ ನಾಯಕರು 'ರಾವಣ ಭಕ್ತರು' 'ರಾಮಭಕ್ತರು' ಅಲ್ಲ. ಬಿಜೆಪಿಯ ಕೇಂದ್ರದ ಮಂತ್ರಿಗಳು ನಿನ್ನೆ 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ ಟಿಕೆಟ್ಗಳನ್ನು ಉಚಿತವಾಗಿ ವಿತರಿಸಿದ್ದಾರೆ,. ಅದೇ ರೀತಿ ಪೆಟ್ರೋಲ್, ಡೀಸೆಲ್ ಹಾಗೂ ಎಲ್ ಪಿಜಿಗೂ ಕೂಪನ್ಗಳನ್ನು ವಿತರಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹೇಳಿದ್ದಾರೆ ಸುದ್ದಿ ಸಂಸ್ಥೆ ಎಎನ್ಐ ವರದಿ ಮಾಡಿದೆ.
ಪ್ರತಿದಿನ ಪರಿಷ್ಕರಿಸಲ್ಪಡುವ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯು ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಕಾರಣಕ್ಕೆ ನಾಲ್ಕು ತಿಂಗಳಿಗೂ ಹೆಚ್ಚು ಕಾಲ ಬದಲಾಗದೆ ಉಳಿದಿತ್ತು. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯು ಕಳೆದ ಮಂಗಳವಾರದಿಂದ ಏಳು ಬಾರಿ ಏರಿಕೆಯಾಗಿದೆ.