ಕಾರ್ಮಿಕರಿಂದ ಎರಡನೇ ದಿನದ ಮುಷ್ಕರ

ಉಡುಪಿಯಲ್ಲಿ ಕೇಂದ್ರ ಸರಕಾರದ ಜನವಿರೋಧಿ ನೀತಿ ವಿರುದ್ಧ ಬೃಹತ್ ಪ್ರತಿಭಟನೆ
ಉಡುಪಿ, ಮಾ.29: ಕೇಂದ್ರ ಸರಕಾರದ ಕಾರ್ಮಿಕ, ರೈತ ಹಾಗೂ ಜನ ವಿರೋಧಿ ನೀತಿ ಅನುಸರಿಸುತ್ತುದೆ ಎಂದು ಆರೋಪಿಸಿ ಅಖಿಲ ಭಾರತ ಮುಷ್ಕರದ ಪ್ರಯುಕ್ತ ಉಡುಪಿ ಜಿಲ್ಲಾ ಕಾರ್ಮಿಕ ಸಂಘಗಳ ಜಂಟಿ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಯಿತು.
ಮಣಿಪಾಲದ ಸಿಂಡಿಕೇಟ್ ಸರ್ಕಲ್‌ನಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಜಿಲ್ಲಾಧಿಕಾರಿ ಕಚೇರಿ ಎದುರು ಸಮಾಪ್ತಿಗೊಂಡಿತು. ಇದರಲ್ಲಿ ಬ್ಯಾಂಕ್, ವಿಮಾ ನೌಕರರು, ಕಟ್ಟಡ, ಹೆಂಚು, ಬೀಡಿ, ಕೃಷಿಕೂಲಿ ಕಾರ್ಮಿಕರು, ಅಂಗನ ವಾಡಿ, ಬಿಸಿಯೂಟ ನೌಕರರು ಸೇರಿದಂತೆ ಸಾವಿರಾರು ಮಂದಿ ಭಾಗವಹಿಸಿದ್ದು, ಕೇಂದ್ರ ಸರಕಾರದ ನೀತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಕಾರ್ಮಿಕರ ಕಾನೂನುಗಳನ್ನು ತಿದ್ದುಪಡಿ ಮಾಡುವ ಬದಲು ವಿವಿಧ ಕಾರ್ಮಿಕ ರಿಗೆ ಪ್ರತ್ಯೇಕ ಕಲ್ಯಾಣ ಮಂಡಳಿಗಳನ್ನು ರಚಿಸಿ ಅನುದಾನ ಒದಗಿಸುವ ಕಾರ್ಯ ಕೇಂದ್ರ ಸರಕಾರ ಮಾಡಬೇಕು. ದಿನಕ್ಕೆ 18 ಗಂಟೆಗಳ ಕಾಲ ದುಡಿದರೂ ಆಟೋ ಚಾಲಕರಿಗೆ ಜೀವನ ಸಾಗಿಸಲು ಬೇಕಾದ ವೇತನ ಸಿಗುತ್ತಿಲ್ಲ. ಇದು ಬಂಡವಾಳ ಶಾಹಿ ಸರಕಾರ. ಬಿಜೆಪಿ ಜೊತೆ ಇರುವವರಿಗೆ ಹಣ ಮಾಡಿಕೊಡುವ ದಂಧೆ ಯನ್ನು ಈ ಸರಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ಎಐಐಬಿಇಎಯ ವಿದ್ಯಾ ನಾಯಕ್ ಮಾತನಾಡಿ, ಸರಕಾರ ಬ್ಯಾಂಕ್‌ಗಳನ್ನು ವಿಲೀನ ಮಾಡಿ, ಮುಂದೆ ಖಾಸಗಿಯವರ ಕೈಗೆ ಒಪ್ಪಿಸಲು ಹುನ್ನಾರ ನಡೆಸು ತ್ತಿದೆ. ಇಂದು ಬ್ಯಾಂಕ್ ನೌಕರರು ಒತ್ತಡದಿಂದ ಕೆಲಸ ಮಾಡುವ ಪರಿಸ್ಥಿತಿಯನ್ನು ಸರಕಾರ ನಿರ್ಮಿಸಿದೆ. ನೌಕರರು ಒಂದೊಂದೆ ಸೌಲಭ್ಯಗಳನ್ನು ಕಳೆದುಕೊಳ್ಳುತ್ತಿ ದ್ದಾರೆ. ಬ್ಯಾಂಕ್‌ಗಳನ್ನು ಖಾಸಗೀಕರಣ ಮಾಡಿದರೆ ಮುಂದೆ ಅದು ಸಾಮಾನ್ಯ ಜನರ ಕೈಗೆ ಎಟುಕದ ರೀತಿಯಲ್ಲಿ ಇರುತ್ತದೆ ಎಂದು ದೂರಿದರು.
ಈ ಸಂದರ್ಭದಲ್ಲಿ ವಿಮಾ ನೌಕರರ ಸಂಘಟನೆಯ ಪ್ರಭಾಕರ ಬಿ.ಕುಂದರ್, ಅಂಗನವಾಡಿ ನೌಕರರ ಸಂಘದ ಸುಶೀಲಾ ನಾಡ, ಹೆಂಚು ಕಾರ್ಮಿಕರ ಸಂಘದ ಎಚ್.ನರಸಿಂಹ, ಎಐಟಿಯುಸಿಯ ಶೇಖರ್, ಬ್ಯಾಂಕ್ ಎಂಪ್ಲಾಯಿಸ್ ಪೆಡರೇಶನ್ ಆಫ್ ಇಂಡಿಯಾದ ರವೀಂದ್ರ, ಕರ್ಣಾಟಕ ಬ್ಯಾಂಕ್ ಆಫೀಸರ್ ಅಸೋಸಿಯೇಶನ್ ರವಿಶಂಕರ್ ಮಾತನಾಡಿದರು.
ಪ್ರತಿಭಟನೆಯಲ್ಲಿ ಎಐಟಿಯುಸಿಯ ಸಂಜೀವ ಶೇರೆಗಾರ್, ಸಿಐಟಿಯುನ ವಿಶ್ವನಾಥ್ ರೈ, ಬಾಲಕೃಷ್ಣ ಶೆಟ್ಟಿ, ಕವಿರಾಜ್, ವಿಮಾ ನೌಕರರ ಸಂಘದ ವಿಶ್ವನಾಥ್, ಬಿಸಿಯೂಟ ನೌಕರರ ಸಂಘದ ಸುನಾಂದ, ಮುಖಂಡರಾದ ಬಲ್ಕೀಸ್, ಮಹಾಬಲ ವಡೇರಹೋಬಳಿ, ವೆಂಕಟೇಶ್ ಕೋಣಿ, ಶೇಖರ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಮಿಕ ಸಂಘಗಳ ಜಂಟಿ ವೇದಿಕೆಯ ಕೆ.ಶಂಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಶಿಧರ್ ಗೊಲ್ಲ ವಂದಿಸಿದರು. ಬಳಿಕ ವಿವಿಧ ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನ ಮಂತ್ರಿಗೆ ಸಲ್ಲಿಸಲಾಯಿತು.



