ವಿಶೇಷ ಕೋರ್ಟ್ ಗೆ ಸೀಡಿ ಸಂತ್ರಸ್ತೆಯ ಪ್ರಕರಣ ವರ್ಗ

ಬೆಂಗಳೂರು, ಮಾ.29: ಮಾಜಿ ಸಚಿವ, ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಸಂಬಂಧಿಸಿದ ಸೀಡಿ ಪ್ರಕರಣದಲ್ಲಿ ಸಂತ್ರಸ್ತೆ ಸಲ್ಲಿಸಿರುವ ಅರ್ಜಿಗಳನ್ನು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ಸ್ಥಾಪನೆಯಾಗಿರುವ ಹೈಕೋರ್ಟ್‍ನ ವಿಶೇಷ ಕೋರ್ಟ್‍ಗೆ ವರ್ಗಾಯಿಸಲು ಏಕಸದಸ್ಯ ಪೀಠ ಆದೇಶಿಸಿದೆ.
ಸೀಡಿ ಪ್ರಕರಣದ ತನಿಖೆಗೆ ಎಸ್‍ಐಟಿ ರಚಿಸಿದ ಆದೇಶ ಪ್ರಶ್ನಿಸಿ ಮತ್ತು ರಮೇಶ್ ಜಾರಕಿಹೊಳಿ ಕಬ್ಬನ್ ಪಾರ್ಕ್ ಠಾಣೆಗೆ ನೀಡಿದ್ದ ಬ್ಲ್ಯಾಕ್ ಮೇಲ್ ದೂರು ಆಧರಿಸಿ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಸಂತ್ರಸ್ತೆ ಸಲ್ಲಿಸಿರುವ ಪ್ರತ್ಯೇಕ ಎರಡು ಅರ್ಜಿಗಳು, ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದವು.
ಇದಕ್ಕೂ ಮುನ್ನ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರು ವಾದಿಸಿ, ಎಸ್‍ಐಟಿ ರಚನೆ ಸಿಂಧುತ್ವ ಪ್ರಶ್ನಿಸಿರುವ ಅರ್ಜಿಯಲ್ಲಿ ಪ್ರಮುಖ ಕೋರಿಕೆಗಳಿವೆ. ಆ ಕುರಿತು ನಿಮ್ಮ ನ್ಯಾಯಪೀಠವೇ ವಾದ ಆಲಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಮೂರ್ತಿಗಳು, ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣ ಆಲಿಸಲು ವಿಶೇಷ ಪೀಠ ರಚಿಸಿ ಈ ಹಿಂದೆಯೇ ಮುಖ್ಯ ನ್ಯಾಯಮೂರ್ತಿಗಳ ಆದೇಶ ಮಾಡಿದ್ದಾರೆ. ಹೀಗಾಗಿ, ನಾವು ಆ ಆದೇಶಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು. ರಾಜ್ಯ ಸರಕಾರದ ಪರವಾಗಿ ಹಾಜರಿದ್ದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು ಉತ್ತರಿಸಿ, ನ್ಯಾ. ಸುನಿಲ್‍ದತ್ ಯಾದವ್ ಅವರು ಜನಪ್ರತಿನಿಧಿಗಳಿಗೆ ಸಂಬಂಧಿಸಿದ ಪ್ರಕರಣಗಳನ್ನು ವಿಚಾರಣೆ ನಡೆಸಲಿದ್ದಾರೆ ಎಂದು ತಿಳಿಸಿದರು.







