ಅಂಚೆ ಇಲಾಖೆಯ ಖಾಸಗೀಕರಣದ ವಿರುದ್ಧ ಧ್ವನಿ: ವಿನಯ ಕುಮಾರ್ ಸೊರಕೆ
ವಿವಿಧ ಬೇಡಿಕೆಗಾಗಿ ಅಂಚೆ ನೌಕರರ ಎರಡನೆ ದಿನದ ಮುಷ್ಕರ

ಉಡುಪಿ : ಅಂಚೆ ಇಲಾಖೆಯನ್ನು ಖಾಸಗೀಕರಣ ಮಾಡುವ ಬದಲು ಲಾಭದಾಯಕ ಇಲಾಖೆಯನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಪರಿಶೀಲನೆ ನಡೆಸುವಂತೆ ಹಾಗೂ ಈ ಇಲಾಖೆಯನ್ನು ಉಳಿಸಿಕೊಳ್ಳುವಂತೆ ಲೋಕಸಭೆ ಹಾಗೂ ರಾಜ್ಯಸಭೆಗಳಲ್ಲಿ ಧ್ವನಿ ಎತ್ತುವಂತೆ ಪಕ್ಷದ ನಾಯಕರಲ್ಲಿ ಮಾತುಕತೆ ನಡೆಸಲಾಗುವುದು ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಭರವಸೆ ನೀಡಿದ್ದಾರೆ.
ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರದ ಪ್ರಯುಕ್ತ ಅಂಚೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಉಡುಪಿ ವಿಭಾಗದ ನೇತೃತ್ವದಲ್ಲಿ ಉಡುಪಿ ಮುಖ್ಯ ಅಂಚೆ ಕಚೇರಿ ಎದುರು ಮಂಗಳವಾರ ನಡೆದ ಎರಡನೆ ದಿನದ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಅತ್ಯಂತ ಪ್ರಾಮಾಣಿಕ ಹಾಗೂ ನಿಷ್ಠಾವಂತ ನೌಕರರನ್ನು ಹೊಂದಿರುವ ಅಂಚೆ ಇಲಾಖೆ, ಜಗತ್ತಿನಲ್ಲಿಯೇ ಪ್ರಮುಖ ಸ್ಥಾನಮಾನವನ್ನು ಹೊಂದಿದೆ. ಇಂತಹ ಇಲಾಖೆ ಸೇರಿ ಒಟ್ಟು ೩೪ ವಿವಿಧ ಸರಕಾರಿ ಇಲಾಖೆಗಳನ್ನು ಕೇಂದ್ರ ಸರಕಾರ ಖಾಸಗೀಕರಣಗೊಳಿಸುತ್ತ ಮುಖ ಮಾಡಿದೆ. ಕೇಂದ್ರ ಸರಕಾರ ತನ್ನ ಕಣ್ಣು ಕಿವಿ ತೆರೆದು ಅಂಚೆ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಉಡುಪಿ ವಿಭಾಗದ ಅಧ್ಯಕ್ಷ ಅಧ್ಯಕ್ಷ ಪ್ರವೀಣ್ ಜತ್ತನ್, ಸಂಚಾಲಕ ಸುಹಾಸ್, ಜಂಟಿ ಸಂಚಾಲಕ ಸುರೇಶ್ ಕೆ., ಮುಖಂಡರಾದ ಎಚ್.ಕೆ.ಭಾಸ್ಕರ್ ಶೆಟ್ಟಿ, ಬಿ.ವಿಜಯ ನಾರಿ, ಸುಭಾಸ್ ತಿಂಗಳಾಯ, ಕಳತ್ತೂರು ದಿವಾಕರ್ ಶೆಟ್ಟಿ, ಉಮೇಶ್ ನಾಯಕ್, ಮಾಧವ ಅಡಿಗ, ಸಿ.ಕೆ. ನಾರಾಯಣ್, ಬಸವ ಬಿಲ್ಲವ, ಸುರೇಶ್ ಶೇರಿಗಾರ್, ಜನಾರ್ದನ್, ಎನ್.ಎ.ನೇಜಾರ್ ಮೊದಲಾದವರು ಉಪಸ್ಥಿತರಿದ್ದರು.
‘ಮುಷ್ಕರದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿರುವ ೨೬೦ ಅಂಚೆ ಕಚೇರಿ ಗಳು ಬಾಗಿಲು ಮುಚ್ಚಿ ಪ್ರತಿಭಟನೆ ನಡೆಸಿವೆ. ಇಲ್ಲಿನ ೮೫೦ಕ್ಕೂ ಅಧಿಕ ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕಕರರು ಈ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ’
-ಪ್ರವೀಣ್ ಜತ್ತನ್, ಅಧ್ಯಕ್ಷರು, ಅಂಚೆ ನೌಕರರ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ